ವೀರಾಜಪೇಟೆ, ಅ. ೨೧: ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾತಿ ಮತ ಭೇಧವಿಲ್ಲದೆ ಜನರ ಏಳಿಗೆಗಾಗಿ ಸರಕಾರ ಮಾಡುವಂತ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಅರಮೇರಿ ಕಳಂಚೇರಿ ಶ್ರೀಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀರಾಜಪೇಟೆ ಮಹಿಳಾ ಸಮಾಜದಲ್ಲಿ ನಡೆದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾದರಿ ಸಂಸ್ಥೆಯಾಗಿದ್ದು ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸಿ ಅವರ ಶ್ರೇಯೊಭಿವೃದ್ದಿಗೆ ಗಮನದಲ್ಲಿಟ್ಟುಕೊಂಡು ಸ್ವಾವಲಂಬನೆಯ ಬದುಕಿಗೆ ಕಳೆದ ೪೦ ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ದುಗ್ಗೆಗೌಡ ಅವರು ಮಾತನಾಡಿ ಸಮಾಜ ಸೇವೆಗಾಗಿ ಯೋಜನೆಯ ಒಕ್ಕೂಟದ ಪದಾಧಿಕಾರಿಗಳು ಜನರ ಸೇವೆ ಮಾಡಲು ಮುಂದಾಗಬೇಕು. ಇತಿಹಾಸವಿರುವ ಧರ್ಮಸ್ಥಳ ಪುಣ್ಯ ಕ್ಷೇತ್ರ ಕಷ್ಟದಲ್ಲಿರುವವರನ್ನು ಕೈಹಿಡಿದು ಮೇಲೆತ್ತುವಂತಹ ಸಂಸ್ಥೆ, ಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಅವರು ಮಾತನಾಡಿ, ಮರುಪಾವತಿ ಚೀಟಿ, ಮಾಸಿಕ ವರದಿ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಮಡಿಕೇರಿ ಐಡಿಬಿಐ ಬ್ಯಾಂಕ್ ಸಹಾಯಕ ಪ್ರಭಂದಕ ವಂಶಿ ಅವರು ಮಾತನಾಡಿ ಬ್ಯಾಂಕ್ ಹಾಗೂ ಮಹತ್ವದ ಯೋಜನೆಯ ಪಾರದರ್ಶಕ ವ್ಯವಹಾರದ ವಿವರಣೆ ಬಗ್ಗೆ ಮಾಹಿತಿ ನೀಡಿದರು.

ಯೋಜನೆಯ ಅಧಿಕಾರಿ ಬಿ.ದಿನೇಶ್ ಅವರು ತಾಲೂಕಿನ ಸಾಧನ ವರದಿ ಮಂಡಿಸಿದರು. ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಅನೀಲ್ ಕುಮಾರ್ ಮಾತನಾಡಿದರು.

ಒಕ್ಕೂಟದ ಪದಾಧಿಕಾರಿಗಳ ಸಮಾವೇಶದಲ್ಲಿ ೨೦ ಒಕ್ಕೂಟ ಹಾಗೂ ವಲಯಗಳನ್ನು ಗುರುತಿಸಲಾಯಿತು. ಚಿನ್ನದ ಹೆಜ್ಜೆ ಎಂಬ ಯೋಜನೆ ನಡೆದು ಬಂದ ಹಾದಿ ಬಗ್ಗೆ ಸಾಕ್ಷö್ಯಚಿತ್ರ ಪ್ರದರ್ಶಿಸಲಾಯಿತು.

ಎಲ್ಲಾ ಒಕ್ಕೂಟದ ಅಧ್ಯಕ್ಷರುಗಳಿಂದ ಸಂಕಲ್ಪ ಜ್ಯೋತಿ ಬೆಳಗಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ದಿನೇಶ್, ಕಾನೂರು ವಲಯ ಮೇಲ್ವಿಚಾರಕ ಸುಜೀರ್ ಕುಲಾಲ, ಜ್ಞಾನ ವಿಕಾಸ ಸಮನ್ವಾಯಧಿಕಾರಿ ಆರ್. ಶ್ರೇಯಾ, ಮೇಲ್ವಿಚಾರಕ ಶ್ರೇಣೆಯ ಸಿಬ್ಬಂದಿಗಳು, ಕಚೇರಿ ಪ್ರಬಂಧಕರು ಮತ್ತು ಸಿಬ್ಬಂದಿಗಳು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಜರಿದ್ದರು.