ಕೂಡಿಗೆ, ಅ. ೨೧: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿ, ಕಾಡು ಬಿಟ್ಟು ನಾಡಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಪ್ರಾಣ ಹಾನಿ ಮಾಡುವುದರೊಂದಿಗೆ ತೋಟ, ಕೃಷಿ ಭೂಮಿಗಳಿಗೆ ಲಗ್ಗೆಯಿಟ್ಟು, ಅಪಾರ ಪ್ರಮಾಣದ ಬೆಳೆಗಳನ್ನು ತಿಂದು ತುಳಿದು ನಷ್ಟ ಪಡಿಸುತ್ತಿವೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಕುಂಬಾರ ಹಡಲು, ಭುವನಗಿರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅತಿಯಾದ ಮಳೆಯಿಂದಾಗಿ ಜೋಳದ ಬೆಳೆಯು ಹಾಳಾಗಿದ್ದು ಉಳಿದ ಮೆಕ್ಕೆಜೋಳದ ಬೆಳೆಯನ್ನು ಉಳಿಸಿಕೊಳ್ಳಲು ಈ ವ್ಯಾಪ್ತಿಯ ಅನೇಕ ರೈತರು ೨೫ಕ್ಕೂ ಹೆಚ್ಚು ಅಟ್ಟಣಿಗೆಗಳನ್ನು ನಿರ್ಮಿಸಿಕೊಂಡು ತಮ್ಮ ಬೆಳೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಸಮೀಪದ ಜೇನುಕಲ್ಲು ಬೆಟ್ಟ ಮತ್ತು ಯಡವನಾಡು ಮೀಸಲು ಅರಣ್ಯ ಪ್ರದೇಶವು ಸೀಗೆಹೊಸೂರು ಸೇರಿದಂತೆ ಇತರ ಗ್ರಾಮಗಳಲ್ಲಿ ಉಳಿದ ಮೆಕ್ಕೆಜೋಳದ ಬೆಳೆಯು ಈಗಾಗಲೇ ಕಟಾವು ಹಂತಕ್ಕೆ ಬಂದಿರುವ ಹಿನ್ನೆಲೆ ಎರಡು ಕಡೆಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮೆಕ್ಕೆಜೋಳದ ರಕ್ಷಣೆಗೆ ಈ ಭಾಗದ ರೈತರು ತಮ್ಮ ತಮ್ಮ ಜಮೀನಿನಲ್ಲಿ ಅಟ್ಟಣಿಗೆಗಳನ್ನು ನಿರ್ಮಿಸಿಕೊಂಡು ಆನೆಗಳ ಚಲನವಲನಗಳನ್ನು ವೀಕ್ಷಿಸಿ ಆನೆಗಳು ಬಂದ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಕಾಡಿನತ್ತ ಓಡಿಸುವ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.

ಯಡವನಾಡು ಮತ್ತು ಜೇನುಕಲ್ಲು ಬೆಟ್ಟದ ಕಾಡಿನ ಕಡೆಯಿಂದ ಬರುವ ಕಾಡಾನೆಗಳ ಆನೆ ಕಂದಕವನ್ನು ಲೆಕ್ಕಿಸದೇ ಜಮೀನಿಗೆ ಬರುತ್ತಿರುವುದ ರಿಂದಾಗಿ ಬೆಳೆಗಾರರು ಬೆಳೆ ರಕ್ಷಣೆಗೆ ಈ ತಂತ್ರ ಕೈಗೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಹಾಕಿರುವ ಸೋಲಾರ್ ವಿದ್ಯುತ್ ತಂತಿಗಳನ್ನು ಸಹ ಕಾಡಾನೆಗಳು ತಂಡು ಮಾಡಿ ಬರುತ್ತಿರುವುದು ಕಂಡು ಬರುತ್ತಿದೆ ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಮಾಹಿತಿಯನ್ನು ನೀಡಿದ್ದಾರೆ.

-ಕೆ. ಕೆ. ನಾಗರಾಜಶೆಟ್ಟಿ