ಮಡಿಕೇರಿ, ಅ. ೨೧: ೧೭ ದಿನಗಳ ದಸರಾ ರಜೆ ಕಳೆದು ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಆಶ್ಚರ್ಯ ಕಾದಿತ್ತು. ತಮ್ಮ ಶಾಲೆಯ ಆವರಣದಲ್ಲಿ ಈಜುಕೊಳವೊಂದು ನಿರ್ಮಾಣವಾಗಿತ್ತು. ನೀರು ಕಂಡರೆ ವಿದ್ಯಾರ್ಥಿಗಳು ಸುಮ್ಮನಿರುತ್ತಾರ ನೀರಿಗೆ ಧುಮುಕಿದರು.. ಆಟವಾಡಿದರು... ಇವೆಲ್ಲ ನಡೆದದ್ದು ಮುಳ್ಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಹಲವಾರು ವಿಶೇಷತೆಗಳಿಗೆ ಕಾರಣವಾದ ಮುಳ್ಳೂರು ಸರ್ಕಾರಿ ಶಾಲೆಯಲ್ಲಿ ಈ ದಸರಾ ರಜೆಯಲ್ಲೂ ಶಿಕ್ಷಕರು ಕೆಲಸ ಮಾಡುವುದರ ಮೂಲಕ ಶಾಲಾ ಆವರಣದಲ್ಲಿ ಸುಂದರವಾದ

(ಮೊದಲ ಪುಟದಿಂದ) ಈಜುಕೊಳವೊಂದು ನಿರ್ಮಾಣಗೊಂಡು ಪೋಷಕರ ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವತಃ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ನಿರ್ಮಿಸಿದ ಈಜುಕೊಳ ಇದಾಗಿದ್ದು ೨೦x೧೫ ಅಡಿ ವಿಸ್ತೀರ್ಣದಲ್ಲಿ ಈ ಈಜುಕೊಳ ನಿರ್ಮಾಣ ಗೊಂಡಿದೆ.

ಪುಟ್ಟ ಮಕ್ಕಳ ಹಿತ ರಕ್ಷಣೆಯ ದೃಷ್ಟಿಯಿಂದ ಕೇವಲ ಎರಡು ಅಡಿ ಆಳದಲ್ಲಿ ಈ ಈಜುಕೊಳ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ಖುಷಿಖುಷಿಯಾಗಿ ಶಾಲೆಗೆ ಬರುವಂತೆ ಮಾಡಲು ಹಾಗೂ ಶಾಲಾ ಪರಿಸರವನ್ನು ಆಕರ್ಷಣೀಯಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ನೀರಿನಲ್ಲಿನ ಸುರಕ್ಷತೆಯ ಮಾರ್ಗ ಹಾಗೂ ಸ್ವಯಂ ರಕ್ಷಣಾ ತಂತ್ರಗಳನ್ನು ಕರಗತ ಮಾಡಿಸಲು, ನೀರಿನಲ್ಲಿನ ವಿವಿಧ ಜಲಚರಗಳ ಅಭ್ಯಾಸ, ಮೀನು ಸಾಕಾಣಿಕೆ ಇವುಗಳ ಬಗ್ಗೆ ಅರಿವು ಮೂಡಿಸಲು ಈ ಕೊಳ ನಿರ್ಮಾಣ ಮಾಡಿದ್ದಾಗಿ ಮುಖ್ಯ ಶಿಕ್ಷಕ ಸತೀಶ್ ತಿಳಿಸಿದ್ದಾರೆ.

ಸ್ಥಳೀಯವಾಗಿ ದೊರೆಯುವ ಕಲ್ಲು, ಕಾಲುವೆಯಲ್ಲಿ ಕೊಚ್ಚಿಕೊಂಡು ಬರುವ ಮರಳು ಹೀಗೆ ಬಹುತೇಕ ಸ್ಥಳೀಯವಾಗಿ ದೊರೆಯುವ ಸಂಪನ್ಮೂಲಗಳನ್ನೆ ಬಳಸಿಕೊಂಡು ಈ ಈಜುಕೊಳವನ್ನು ನಿರ್ಮಿಸಲಾಗಿದೆ. ಸಹ ಶಿಕ್ಷಕರಾದ ಜಾನ್ ಪಾವ್ಲ್ ಡಿಸೋಜ ಅವರು ಕೂಡ ಸತೀಶ್ ಅವರೊಂದಿಗೆ ಈಜುಕೊಳ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಈಜು ದೇಹದ ಸಂಪೂರ್ಣ ವ್ಯಾಯಾಮವಾಗಿದ್ದು, ಇದು ವಿದ್ಯಾರ್ಥಿಗಳಲ್ಲಿ ಹೃದಯದ ಆರೋಗ್ಯ ಹಾಗೂ ಸ್ನಾಯು ಬಲವನ್ನು ವೃದ್ದಿಗೊಳಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಸತೀಶ್. ಈಜುಕೊಳದ ಮೇಲ್ಭಾಗದಲ್ಲಿ ಸುಮಾರು ೧೦ ಅಡಿ ಉದ್ದದಲ್ಲಿ ಸುಂದರವಾದ ತೂಗು ಸೇತುವೆಯನ್ನು ಕೂಡ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ನಿರ್ಮಾಣ ಮಾಡಿದ್ದು ಇದು ಈಜುಕೊಳದ ಸೌಂದರ್ಯವನ್ನು ಹೆಚ್ಚು ಮಾಡಿದೆ ಅಲ್ಲದೆ ಇದರ ಪಕ್ಕದಲ್ಲೇ ವಿದ್ಯಾರ್ಥಿಗಳ ಶಾರೀರಿಕ ಸಮತೋಲನಕ್ಕಾಗಿ ಸುಮಾರು ೨೦ಅಡಿ ಉದ್ದದಲ್ಲಿ ರೋಪ್ ವಾಕ್ ಅನ್ನು ಕೂಡ ನಿರ್ಮಿಸಲಾಗಿದೆ.