ಕಣಿವೆ, ಅ. ೨೧: ಕೊಡಗು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಾಗಿ ಇರುವಂತಹ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆಯಾಗಬೇಕಿದ್ದ ಕಲಾಭವನ ಕಟ್ಟಡ ಕಾಮಗಾರಿ ಸತತ ೧೫ ವರ್ಷ ಗತಿಸಿದರೂ ಕೂಡ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅವಸಾನದತ್ತ ಸಾಗಿದೆ.

ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ಪ್ರದರ್ಶನಗಳ ವೇದಿಕೆಯಾಗಬೇಕಿದ್ದ ಕುಶಾಲನಗರದ ಕಾವೇರಿ ಬಡಾವಣೆಯಲ್ಲಿನ ಕಲಾಭವನ ಕಟ್ಟಡ ಬೀದಿ ನಾಯಿಗಳ ಆಶ್ರಯತಾಣವಾಗಿದೆ.

ಬರೋಬ್ಬರಿ ೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಂದು ಎಕರೆ ವಿಶಾಲ ಪ್ರದೇಶದಲ್ಲಿ ಕಳೆದ ೧೫ ವರ್ಷಗಳ ಹಿಂದೆ ಆರಂಭವಾದ ಈ ಕಟ್ಟಡ ಕಾಮಗಾರಿ ಆಮೆ ವೇಗಕ್ಕಿಂತಲೂ ಕ್ಷೀಣಗೊಂಡ ಸ್ಥಿತಿಯಲ್ಲಿ ಸಾಗಿ ಕೊನೆಗೆ ಯಾರೂ ಗತಿಯೇ ಇಲ್ಲವೆಂಬAತೆ ಕೈಚೆಲ್ಲಿದ ಸ್ಥಿತಿಯಲ್ಲಿಯೇ ಇದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಲೆಎತ್ತಬೇಕಿದ್ದ ಈ ಕಲಾಭವನ ಕಟ್ಟಡ ಕಾಮಗಾರಿ ಜಿಲ್ಲಾ ಕೇಂದ್ರದಲ್ಲಿ ಸೂಕ್ತವಾದ ಸ್ಥಳಾವಕಾಶದ ಕೊರತೆ ಇದ್ದ ಹಿನ್ನೆಲೆಯಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಜಯರಾಮರಾಜೇ ಅರಸು ಅವರು ವಿಶೇಷ ನಿಯಮದಡಿ ಕುಶಾಲನಗರಕ್ಕೆ ಕಲಾಭವನ ಕಟ್ಟಡವನ್ನು ಮಂಜೂರಾತಿ ಮಾಡಿದ್ದರು.

ಕೊನೆಗೆ ಲೋಕೋಪಯೋಗಿ ಇಲಾಖೆ ಈ ಕಟ್ಟಡದ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತು.

ಈ ಕಟ್ಟಡಕ್ಕೆ ಕ್ರಿಯಾಯೋಜನೆಗೆ ದುಪ್ಪಟ್ಟು ಹಣ ವಿನಿಯೋಗಿಸಲಾಗಿದೆ. ಆದರೂ ಕೂಡ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಅಪೂರ್ಣಗೊಂಡ ಕಟ್ಟಡದೊಳಗೆ ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಜೊತೆಗೆ ಕುಶಾಲನಗರದ ಒಂದಷ್ಟು ಪ್ರಮುಖ ಕಾರ್ಯಕ್ರಮಗಳು ಈ ಅಪೂರ್ಣ ಕಟ್ಟಡದೊಳಗೆ ನಡೆದಿವೆ.

ಇನ್ನಾದರೂ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ಕುಶಾಲನಗರ ಪಟ್ಟಣ ಪಂಚಾಯಿತಿ ಒಂದಷ್ಟು ಆಸಕ್ತಿವಹಿಸುವ ಮೂಲಕ ಕಲಾ ಭವನ ಕಟ್ಟಡ ಕಾಮಗಾರಿಗೆ ಒಂದು ಸ್ವರೂಪ ನೀಡಬೇಕಿದೆ.

ಆ ಮೂಲಕ ಕುಶಾಲನಗರ ತಾಲೂಕಿನ ಸಾಂಸ್ಕೃತಿಕ ಕಲಾವಿದರು ಹಾಗೂ ಕಲಾಪೋಷಕರಿಗೆ ಅನುವು ಮಾಡಿಕೊಡಬೇಕಿದೆ ಎಂಬುದು ಸಾಹಿತ್ಯಾಸಕ್ತರ ಆಗ್ರಹವಾಗಿದೆ. ವರದಿ : ಕೆ.ಎಸ್. ಮೂರ್ತಿ