- ಅನಿಲ್ ಎಚ್.ಟಿ
ಮಡಿಕೇರಿ, ಅ. ೨೪ : ಪ್ರವಾಸಿಗರ ಅರಸುವಿಕೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ಸೌಂದರ್ಯ ಸಂರಕ್ಷಿಸಿಕೊAಡು ಹೊಣೆಗಾರಿಕೆಯ ಪ್ರವಾಸೋದ್ಯಮ ಕೈಗೊಳ್ಳುವಂತೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ ಕರೆ ನೀಡಿದ್ದಾರೆ.
ನಗರದ ಕ್ಲಬ್ ಮಹೀಂದ್ರ ರೆಸಾರ್ಟ್ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲಾಡಳಿತ, ಕೊಡಗು ಪ್ರವಾಸೋದ್ಯಮ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕನೆಕ್ಟ್ ಕೊಡಗು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ವೈನ್ ಮಾರಾಟದ ಪ್ರಕರಣಗಳು ಹೆಚ್ಚುತ್ತಿರುವ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕೆ.ಎಸ್.ಟಿ.ಡಿ.ಸಿ ಯು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅನಧಿಕೃತ ಮತ್ತು ಕಳಪೆ ಗುಣಮಟ್ಟದ ವೈನ್ ಉತ್ಪಾದನೆಗೆ ಕಡಿವಾಣ ಹಾಕಲು ಮುಂದಾಗಲಿದೆ. ಕಳಪೆ ಗುಣಮಟ್ಟದ ವೈನ್ ಉತ್ಪಾದಕರ ಲೈಸನ್ಸ್ ಕೂಡ ರದ್ದು ಮಾಡುವ ಕಠಿಣ ಕ್ರಮಕ್ಕೂ ಇಲಾಖೆ ಮುಂದಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆ ಆರೋಗ್ಯ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದ ಜಿಲ್ಲೆಯಾಗಿದೆ, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯು ಕೊಡಗಿನಲ್ಲಿ ಈ ಎರಡೂ ಪ್ರಕಾರಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಹೇಳಿದ ಡಾ. ರಾಜೇಂದ್ರ, ನಿಸರ್ಗ ಸೌಂದರ್ಯ ಬಯಸುವ ಪ್ರವಾಸಿಗರು, ಒಂಟಿಯಾಗಿ ಪ್ರವಾಸ ಮಾಡುವವರು, ಒಬ್ಬಂಟಿಯಾಗಿ ಪ್ರವಾಸ ಮಾಡುವ ಮಹಿಳೆಯರಿಗೂ ಕೊಡಗಿನ ಭೇಟಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಸೂಕ್ತ ಮಾಹಿತಿ ನೀಡಲಾಗುತ್ತದೆ. ಉತ್ತರ ಭಾರತದಂತೆಯೇ ಕೊಡಗಿನಲ್ಲಿಯೂ ಪ್ರಾಚೀನ ಕಾಲದ ಮನೆಗಳು, ಐತಿಹ್ಯಗಳಿದ್ದು ಇವುಗಳನ್ನು ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸುವ ಮೂಲಕ ವಿನೂತನ ಪ್ರವಾಸೋದ್ಯಮಕ್ಕೂ ಕೊಡಗಿನಲ್ಲಿ ಅವಕಾಶ ನೀಡಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಹೆದ್ದಾರಿಯಲ್ಲಿ ಪ್ರತೀ ೬೦ ಕಿ.ಮೀ. ಗೆ ಒಂದರAತೆ ಶೌಚಾಲಯ, ಅಡುಗೆ ಮಾಡುವ ಸ್ಥಳ, ಶಾಪಿಂಗ್ ಸೇರಿದಂತೆ ಇತರ ಸೌಲಭ್ಯಗಳು ಪ್ರವಾಸಿಗರಿಗೆ ದೊರಕಬೇಕೆಂಬ ನಿಯಮವಿದೆ. ಈ ನಿಟ್ಟಿನಲ್ಲಿ ಕೊಡಗಿಗೆ
(ಮೊದಲ ಪುಟದಿಂದ) ಇರುವ ಹೆದ್ದಾರಿ ಬದಿಯಲ್ಲಿಯೂ ಇಂಥ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಕ್ರಮ ವಹಿಸಲಿದೆ ಎಂದೂ ಡಾ. ರಾಜೇಂದ್ರ ಭರವಸೆ ನೀಡಿದರು.
ಕೇಂದ್ರ ಸರ್ಕಾರ ಹೊಸ ಯೋಜನೆ ಮುಖಾಂತರ ಹೋಂಸ್ಟೇಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ಹೋಂಸ್ಟೇಗಳಲ್ಲಿ ಯಾವುದೇ ಕಾರಣಕ್ಕೂ ಮದ್ಯ ಸರಬರಾಜು ಮಾಡಲು ಅನುಮತಿ ಇಲ್ಲ. ಹೋಂಸ್ಟೇಗಳಲ್ಲಿ ಮದ್ಯ ಮಾರಾಟ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಎಚ್ಚರಿಸಿದ ರಾಜೇಂದ್ರ, ಅತಿಥಿ ದೇವೋಭವ ಎಂಬ ಪರಿಕಲ್ಪನೆಯನ್ನು ಹೋಂಸ್ಟೇಗಳು ಸೂಕ್ತ ರೀತಿಯಲ್ಲಿ ಬಳಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಆಯಾ ನಾಡಿನ ಪ್ರವಾಸೋದ್ಯಮಿಗಳೇ ಎದುರಿಸಬೇಕಾದೀತು ಎಂದೂ ಕಿವಿಮಾತು ಹೇಳಿದರು.
ಕೊಡಗಿನಂಥ ಪ್ರಕೃತಿ ರಮಣೀಯ ಜಿಲ್ಲೆಯಲ್ಲಿ ನಿಸರ್ಗಕ್ಕೆ ಹಾನಿಯುಂಟಾಗದAತೆ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು, ಕೊಡಗಿಗೆ ಪ್ರಕೃತಿಯೇ ಪ್ರವಾಸೋದ್ಯಮದ ಮೂಲ ಆಧಾರ ಎಂಬುದನ್ನು ಉದ್ಯಮಿಗಳು ಮರೆಯಬಾರದು. ಇತ್ತೀಚಿಗೆ ಪ್ರಾಕೃತಿಕ ವಿಕೋಪ ಸಂಭವಿಸಿದ ವಯನಾಡು ಇದೀಗ ಮತ್ತೆ ವಿಶ್ವವ್ಯಾಪಿ ಪ್ರಚಾರದ ಮೂಲಕ ಪ್ರವಾಸೋದ್ಯಮಕ್ಕೆ ಮುಂದಾಗಿದೆ. ಕಹಿನೆನಪು ಮರೆತು ಅಲ್ಲಿನ ಸ್ಥಳೀಯರು ಮತ್ತೆ ಬದುಕನ್ನು ಪ್ರವಾಸೋದ್ಯಮದ ಮೂಲಕ ಕಟ್ಟಿಕೊಳ್ಳಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಪ್ಲಾಸ್ಟಿಕ್ ಮತ್ತು ತಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳೊAದಿಗೆ ಸ್ಥಳೀಯ ಉದ್ಯಮಿಗಳೂ ಕೈಜೋಡಿಸಬೇಕು. ಸ್ವಯಂ ನಿರ್ಧಾರದ ಮೂಲಕವೇ ಪ್ಲಾಸ್ಟಿಕ್ ಬಳಕೆ ತಡೆಯಬಹುದು, ಎಲ್ಲವನ್ನೂ ಸರ್ಕಾರವೇ ಜಾರಿಗೊಳಿಸುತ್ತದೆ ಎಂದು ಕಾಯಬಾರದು ಎಂದರು.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕೊಡಗಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಜಿಲ್ಲಾಡಳಿತ ನಾನಾ ರೀತಿಯ ಯೋಜನೆ ರೂಪಿಸಿದೆ. ಜನವರಿಯಲ್ಲಿ ಕೊಡಗಿನ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯುಳ್ಳ ಕಾಫಿ ಟೇಬಲ್ ಬುಕ್ ಬಿಡುಗಡೆಯಾಗಲಿದೆ. ಅಂತೆಯೇ ಪ್ರವಾಸಿಗರಿಗೆ ಮಾಹಿತಿ ನೀಡಲು ಆ್ಯಪ್ ಕೂಡ ತಯಾರಾಗುತ್ತಿದೆ, ಕೊಡಗಿಗೆ ಬರುವ ಪ್ರವಾಸಿಗರು ಆ್ಯಪ್ ಮೂಲಕ ಪ್ರವಾಸಿ ತಾಣಗಳು, ಸಂದರ್ಶನ ಸಮಯ, ನೋಂದಾಯಿತ ಹೋಂಸ್ಟೇಗಳು, ವಸತಿ ಗೃಹಗಳು, ಆಯಾ ಸ್ಥಳದ ಇತಿಹಾಸದ ಜೊತೆಗೇ ಸ್ಥಳೀಯ ಹವಾಮಾನದ ಬಗ್ಗೆಯೂ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ, ಅಂತೆಯೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿ ಗೈಡ್ಗಳನ್ನು ನೇಮಕ ಮಾಡಲಾಗುತ್ತದೆ. ‘ಕ್ಯೂಆರ್ ಕೋಡ್’ ಮೂಲಕ ಪ್ರವಾಸೀ ತಾಣಗಳ ಮಾಹಿತಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪಡೆಯಲು ಕೂಡ ಪ್ರವಾಸಿಗರಿಗೆ ಸುಲಭ ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಗೆ ಭೇಟಿ ನೀಡುವ ಪ್ರತೀ ಪ್ರವಾಸಿಗನ ಭೇಟಿಯನ್ನೂ ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಕಿರು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ವೆಬ್ಸೈಟ್ ಕೂಡ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ಕೊಡಗಿನಲ್ಲಿ ಪ್ರವಾಸೋದ್ಯಮಿಗಳು ತಮ್ಮ ವಹಿವಾಟಿನ ಅಭಿವೃದ್ಧಿ ಮಾತ್ರ ಗಮನಿಸದೆ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿಯೂ ಪ್ರವಾಸೋದ್ಯಮವನ್ನು ಗಮನದಲ್ಲಿರಿಸಿಕೊಳ್ಳಬೇಕು, ಹೀಗಾದಲ್ಲಿ ಮಾತ್ರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಯಾವುದೇ ಧಕ್ಕೆಯಾಗದಂತೆ ಪ್ರಗತಿಯಾಗಲಿದೆ ಎಂದು ಹೇಳಿದರು.
ಸ್ಥಳೀಯರಿಗೆ ಸೂಕ್ತ ಉದ್ಯೋಗ ನೀಡುವ ನಿಟ್ಟಿನಲ್ಲಿ ಪ್ರತೀ ವರ್ಷ ಜೂನ್ನಿಂದಲೇ ತಯಾರಿ ನಡೆಯಬೇಕು, ಕಾಲೇಜು ಮುಗಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೊಡಗಿನ ಪ್ರವಾಸೋದ್ಯಮಿಗಳು ಮುಂದಾಗಬೇಕೆAದು ವೆಂಕಟ್ ರಾಜಾ ಮನವಿ ಮಾಡಿದರು,
ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ನಿರ್ದೇಶಕ ಅಯ್ಯಪ್ಪ ಸೋಮಯ್ಯ ಮಾಹಿತಿ ನೀಡಿ, ೨೦೧೯ರಲ್ಲಿ ೧೭ ಸಂಸ್ಥೆಗಳ ಸಹಕಾರದೊಂದಿಗೆ ಪ್ರಾರಂಭವಾದ ಪ್ರವಾಸೋದ್ಯಮ ಸೊಸೈಟಿಯು ಕನೆಕ್ಟ್ ಕಾರ್ಯಕ್ರಮದ ಮೂಲಕ ಆಯಾ ಜಿಲ್ಲೆಗಳಲ್ಲಿ ಆಗಬೇಕಾಗಿರುವ ಯೋಜನೆಗಳ ಬಗ್ಗೆ ಉದ್ಯಮಿಗಳಿಂದ ಮಾಹಿತಿ ಪಡೆದು ಸರ್ಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯೊಂದಿಗೆ ಆಯಾ ಯೋಜನೆ ಜಾರಿಗೆ ಮುಂದಾಗಿದೆ ಎಂದರು.
ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ಮಾತನಾಡಿ, ಕೊಡಗಿನಲ್ಲಿ ಪ್ರವಾಸೋದ್ಯಮ ಬೇಡ ಎಂಬ ಮನೋಭಾವ ಕೆಲವರಲ್ಲಿದೆ, ಸ್ಥಳೀಯರ ವಿಶ್ವಾಸ ಗಳಿಸಿ, ಸಾಧ್ಯವಾದಷ್ಟೂ ಸ್ಥಳೀಯರಿಗೇ ಉದ್ಯೋಗ ಕಲ್ಪಿಸುವ ಮೂಲಕ ಸುಸ್ಥಿರ ಪ್ರವಾಸೋದ್ಯಮಕ್ಕೆ ಕೊಡಗು ಮಾದರಿಯಾಗುವಂತೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಶ್ಯಾಮ್ ರಾಜ್, ಬೃಹತ್ ಬೆಂಗಳೂರು ಹೊಟೇಲ್ ಸಂಘಟನೆ ಅಧ್ಯಕ್ಷ ಪಿ.ಸಿ. ರಾವ್, ಕರ್ನಾಟಕ ಹೊಟೇಲ್ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್, ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ನಜೀರ್, ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಕಾರ್ಯದರ್ಶಿ ಅಂಬೆಕಲ್ ನವೀನ್, ಕೊಡಗು ಟೂರಿಸ್ಟ್ ವಾಹನ ಮಾಲೀಕ, ಚಾಲಕರ ಸಂಘದ ಅಧ್ಯಕ್ಷ ವಸಂತ್, ಕೊಡಗು ಹಿನ್ನೀರು ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರು, ಪ್ರವಾಸೋದ್ಯಮಿಗಳು ಕನೆಕ್ಟ್ ಕೊಡಗು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರವಾಸೋದ್ಯಮಿ ಜಿ. ಚಿದ್ವಿಲಾಸ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಪ್ನ ಮತ್ತು ಚೋಂದಮ್ಮ ಪ್ರಾರ್ಥಿಸಿದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಸ್ವಾಗತಿಸಿದರು.