ಮಡಿಕೇರಿ, ಅ. ೨೪: ಸಂರಕ್ಷಿತ ವನ್ಯಜೀವಿಗಳಾದ ಮಣ್ಣುಮುಕ್ಕ ಹಾವು ಹಾಗೂ ಜೀವಂತ ಉಡವನ್ನು ಮಾರಾಟ ಮಾಡಲು ಯತ್ನಿಸಿದ ಪ್ರತ್ಯೇಕ ಪ್ರಕರಣದಲ್ಲಿ ಈರ್ವರನ್ನು ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಹಾವೇರಿ ಜಿಲ್ಲೆಯ ಇಸಾಕ್ ಹಾಗೂ ಚಿಕ್ಕಬಳ್ಳಾಪುರದ ಬಿ. ಬಾಬು ಬಂಧಿತ ಆರೋಪಿಗಳಾಗಿದ್ದಾರೆ.

ಮಡಿಕೇರಿ ಬಳಿ ಇಸಾಕ್ ಎಂಬಾತ ಒಂದು ಮಣ್ಣುಮುಕ್ಕ ಹಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುವಾಗ ಪತ್ತೆಹಚ್ಚಲಾಗಿದೆ. ಮಡಿಕೇರಿ ಬಳಿ ಬಿ. ಬಾಬು ಎಂಬಾತ ೧ ಜೀವಂತ ಉಡವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಪ್ರಯತ್ನಿಸುವಾಗ ಪತ್ತೆ ಮಾಡಿ ಬಂಧಿಸಲಾಗಿದೆ. ಎರಡು ಪ್ರಕರಣ ಸಂಬAಧ ಪ್ರತ್ಯೇಕ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ.

ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಎಸ್.ಎಸ್. ಕಾಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ಸಿ.ಯು. ಸವಿ, ಹೆಡ್‌ಕಾನ್ಸ್ಟೆಬಲ್‌ಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಎ.ಜಿ. ಉಮೇಶ್, ಪೇದೆ ಸ್ವಾಮಿ ಪಾಲ್ಗೊಂಡಿದ್ದರು.