ಗೋಣಿಕೊಪ್ಪಲು, ಅ.೨೪: ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ ಟರ್ಪ್ ಮೈದಾನದಲ್ಲಿ ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಹಾಕಿ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಹಾಗೂ ಪ್ರಗತಿ ಶಾಲೆ ವೀರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ದಕ್ಷಿಣ ಕನ್ನಡ, ಮೈಸೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಹಾಕಿ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಮೈದಾನಕ್ಕೆ ಬ್ಯಾಂಡ್ ಸೆಟ್ ಮೂಲಕ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

(ಮೊದಲ ಪುಟದಿಂದ) ನಂತರ ಅತಿಥಿಗಳು ಧ್ವಜವಂದನೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದರು.

ಸಭಾ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಮಳೆಯ ಆರ್ಭಟ ಜೋರಾಯಿತು. ಮೈದಾನದಲ್ಲಿ ಮಳೆಯ ನೀರು ನಿಂತ ಹಿನ್ನೆಲೆಯಲ್ಲಿ ಪಂದ್ಯಾವಳಿ ನಡೆಸಲು ಸಮಸ್ಯೆ ಎದುರಾಯಿತು. ಕೆಲ ಸಮಯದ ನಂತರ ಮಳೆ ಬಿಡುವು ನೀಡಿತು. ಮಧ್ಯದಲ್ಲಿ ನಿಂತಿದ್ದ ನೀರನ್ನು ತೆಗೆಯುವ ಮೂಲಕ ಹಾಕಿ ಆಟಕ್ಕೆ ಅನುವು ಮಾಡಿಕೊಡಲಾಯಿತು. ಮೊದಲಿಗೆ ಉದ್ಘಾಟನಾ ಪಂದ್ಯವು ಹಾಸನ ಹಾಗೂ ಕೊಡಗು ಜಿಲ್ಲೆ ತಂಡಗಳ ನಡುವೆ ನಡೆಯಿತು. ಅಪಾರ ಕ್ರೀಡಾಪಟುಗಳು ಆಟವನ್ನು ವೀಕ್ಷಣೆ ಮಾಡಿದರು.

ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಮಾತನಾಡಿ, ಕ್ರೀಡೆಯ ತವರೂರಾದ ಕೊಡಗು ಜಿಲ್ಲೆಗೆ ಆಗಮಿಸಿದ ಕ್ರೀಡಾಪಟುಗಳು ಇಲ್ಲಿನ ಸುಂದರ ಪರಿಸರದ ನಡುವೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಾಗಬೇಕು, ಆಟದಲ್ಲಿ ಸೋಲು, ಗೆಲುವು ಸಹಜ. ಕ್ರೀಡೆಯ ನಿಯಮಗಳನ್ನು ಪಾಲಿಸುವ ಮೂಲಕ ಉತ್ತಮ ಪ್ರದರ್ಶನ ನೀಡುವಂತೆ ಕ್ರೀಡಾಪಟುಗಳಿಗೆ ಕಿವಿ ಮಾತು ಹೇಳಿದರು.

ಅಂತರರಾಷ್ಟಿçÃಯ ರಗ್ಬಿ ಆಟಗಾರ, ಶಿಕ್ಷಕರ ಕಲ್ಯಾಣ ಸಮಿತಿಯ ಅಧ್ಯಕ್ಷ, ಪ್ರಗತಿ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾದ ಮಾದಂಡ ತಿಮ್ಮಯ್ಯ ಮಾತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡಿದರೆ, ಉತ್ತಮ ಹೆಸರು ಸಂಪಾದನೆ ಮಾಡಬಹುದು, ಸಿಕ್ಕಿದ ಅವಕಾಶ ಸಧ್ಬಳಕೆ ಮಾಡಿಕೊಂಡು ಕ್ರೀಡೆಯಲ್ಲಿ ಸಾಧನೆ ಮಾಡಿ, ಇದರಿಂದ ಅಂತರರಾಷ್ಟಿçÃಯ ಮಟ್ಟದಲ್ಲೂ ಹೆಸರು ಮಾಡುವ ಅವಕಾಶ ದೊರೆಯಲಿದೆ. ಇಂತಹ ಅವಕಾಶ ಕ್ರೀಡೆಯಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಎ.ಪರಶುರಾಮಪ್ಪ, ಡಿಡಿಪಿಐ ಸಿ.ರಂಗಧಾಮಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ವೀರಾಜಪೇಟೆ ತಾಲೂಕು ಬಿಇಒ ಡಾ.ಆರ್.ರವಿ, ಮಡಿಕೇರಿಯ ಬಿಪಿಇಒ ಬಿ.ಆರ್.ಗಾಯತ್ರಿ, ಶಿಕ್ಷಣ ಇಲಾಖೆಯ ಶ್ರೀನಿವಾಸ್, ಕವಿತ ತಮ್ಮಯ್ಯ, ಡ್ಯಾನಿ ಈರಪ್ಪ, ಸಿ.ಎನ್.ವಿಶ್ವನಾಥ್, ಅನಿತಾ ಕೆ.ಆರ್. ಸುಬ್ಬಯ್ಯ, ಎಂ.ಕೆ.ರೋಹಿತ್, ಪಿ.ಎ.ಪ್ರವೀಣ್, ಎ.ಸೋಮಯ್ಯ, ಟಿ.ಡಿ.ರಮಾನಂದ, ಹೆಚ್.ಎಸ್.ಮಂಜುನಾಥ್, ಪಿ.ಎ.ಪ್ರಭುಕುಮಾರ್, ಡಾ.ಸೋಮಯ್ಯ, ಎಂ.ಎಸ್.ತಮ್ಮಯ್ಯ, ಬಿ.ಟಿ.ಪೂರ್ಣೇಶ್, ಟಿ.ಎಸ್.ಮಹೇಶ್, ಎನ್.ಎಸ್.ವಿಜಯಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು, ಹಾಜರಿದ್ದರು. ಬಸವರಾಜ್ ಬಡಿಗೇರ್ ಪ್ರಾರ್ಥಿಸಿ, ವಿಷಯ ಪರಿವೀಕ್ಷಕ ಕೆ.ಆರ್. ಬಿಂದು ಸ್ವಾಗತಿಸಿ, ಅನಿತ ನಿರೂಪಿಸಿ, ರಮಾನಂದ ವಂದಿಸಿದರು.