ಸೋಮವಾರಪೇಟೆ, ಅ. ೨೫ : ಪಂಚಾಯಿತಿಯ ೬೦ ಮಳಿಗೆಗಳ ಹರಾಜಿನಿಂದ ಪಂಚಾಯಿತಿಗೆ ಲಕ್ಷಾಂತರ ರೂ. ಆದಾಯ ಲಭಿಸಿದ್ದು, ಮಳಿಗೆಗಳು ಪರಭಾರೆಯಾಗದಂತೆ ಪಂಚಾಯಿತಿ ಆಡಳಿತ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ಸಾರ್ವಜನಿಕ ಹೋರಾಟ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸಿ.ಬಿ. ಸುರೇಶ್ ಶೆಟ್ಟಿ, ಕಳೆದ ೨೪ ವರ್ಷಗಳಿಂದ ಪಾರದರ್ಶಕವಾಗಿ ಹರಾಜು ಪಕ್ರಿಯೆ ನಡೆದಿದ್ದರೆ ಪಂಚಾಯಿತಿಗೆ ಕೋಟಿ ಲೆಕ್ಕದಲ್ಲಿ ಆದಾಯ ಬರುತ್ತಿತ್ತು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಪಂಚಾಯಿತಿಗೆ ನಷ್ಟವಾಗಿದೆ ಎಂದು ಆರೋಪಿಸಿದರು.

೩ ಸಾವಿರ ಬಾಡಿಗೆಯನ್ನು ಪಂಚಾಯಿತಿಗೆ ಕಟ್ಟಿ, ಮಳಿಗೆಗಳನ್ನು ಅಕ್ರಮವಾಗಿ ಪರಭಾರೆ ಮಾಡಿ, ಮಳಿಗೆಗಳಿಂದ ೨೦ರಿಂದ ೪೦ ಸಾವಿರ ಬಾಡಿಗೆಯನ್ನು ಪಡೆದು ಬಾಡಿಗೆ ದಂಧೆಯಲ್ಲಿ ಲಕ್ಷಾಂತರ ಹಣವನ್ನು ಕೆಲವರು ಗಳಿಸಿದ್ದಾರೆ ಎಂದು ದೂರಿದರು.

ಜಿಲ್ಲಾಡಳಿತ ೬೦ ಮಳಿಗೆಗಳ ಹರಾಜಿಗೆ ಅಧಿಸೂಚನೆ ಹೊರಡಿಸಿದ ನಂತರ, ಹರಾಜು ಪ್ರಕ್ರಿಯೆ ತಡೆಯಲು ಕೆಲವರು ಒಂದು ವರ್ಷದಿಂದ ಶ್ರಮಪಟ್ಟಿದ್ದಾರೆ. ನ್ಯಾಯಾಲಯ ದಿಂದಲೂ ತಡೆಯಾಜ್ಞೆ ತಂದಿದ್ದರು. ಮಳಿಗೆಗಳನ್ನು ನಿಯಾಮಾನುಸಾರ ಹರಾಜು ಮಾಡುವಂತೆ ಹೋರಾಟ ಸಮಿತಿ ಹೋರಾಟ ಮಾಡಿಕೊಂಡೆ ಬಂದಿದೆ. ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಹರಾಜು ಪ್ರಕ್ರಿಯೆ ನಡೆಯುವಂತೆ ಎಲ್ಲಾ ತರಹದ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಮುಂದಿನ ಒಂದು ವಾರದಲ್ಲಿ ಹರಾಜಿನಲ್ಲಿ ಮಳಿಗೆಗಳನ್ನು ಪಡೆದುಕೊಂಡವರ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.

ಸಮಿತಿ ಉಪಾಧ್ಯಕ್ಷ ಟಿ.ಈ.ಸುರೇಶ್ ಮಾತನಾಡಿ, ಪರಿಶಿಷ್ಟಜಾತಿ ೯, ಪಂಗಡಕ್ಕೆ ೨, ವಿಶೇಷಚೇತರಿಗೆ ೧ ಮಳಿಗೆಯನ್ನು ಮೀಸಲಿಡುವ ಮೂಲಕ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಕಳೆದ ೪೦ ವರ್ಷಗಳಿಂದಲೂ ದೀನದಲಿತರು ಮಳಿಗೆಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಮೀಸಲಾಗಿರುವ ಮಳಿಗೆಗಳು ಪರಭಾರೆಯಾಗದಂತೆ ಎಚ್ಚರ ವಹಿಸಬೇಕು. ಹಣದ ಆಮಿಷ ತೋರಿಸಿ, ಪರಭಾರೆಯ ಮೂಲಕ ಬೇರೆಯವರು ಮಳಿಗೆಗಳನ್ನು ಕಿತ್ತುಕೊಂಡರೆ, ಪರಿಶಿಷ್ಟಜಾತಿ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಮಳಿಗೆಗಳು ಪರಭಾರೆಯಾಗುವ ಸೂಚನೆಗಳು ಸಿಕ್ಕಿದ್ದು, ಪಂಚಾಯಿತಿ ಆಡಳಿತ ಸೂಕ್ತ ಕ್ರಮಕೈಗೊಳ್ಳದಿದ್ದರೆ, ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಪ್ರತಾಪ್, ಖಜಾಂಚಿ ರಂಗಸ್ವಾಮಿ, ಸಮಿತಿಯ ದಾಕ್ಷಾಯಣಿ ಇದ್ದರು.