ಶಾಸಕ ಸತೀಶ್ ಸೈಲ್ ಸೇರಿ ಇತರರ ಬಂಧನ
ಬೆAಗಳೂರು, ಅ. ೨೫: ಕಾರವಾರದ ಬೇಲೆಕೇರಿ ಬಂದರಿನಲ್ಲಿ ನಡೆದ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಸೇರಿ ಇತರರು ಇದೀಗ ಜೈಲು ಪಾಲಾಗಿದ್ದಾರೆ. ಸಿಬಿಐ ಪರ ವಾದ ಮಂಡಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ಹೇಮಾ, ಆರೋಪಿಗಳು ೩,೧೦೦ ಮೆಟ್ರಿಕ್ ಟನ್ ಅದಿರು ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಗರಿಷ್ಠ ಜೈಲು ಶಿಕ್ಷೆಯ ಜೊತೆ ದಂಡ ವಿಧಿಸಬೇಕು ಎಂದು ಮನವಿ ಸಲ್ಲಿಸಿದರು. ಕಾರವಾರದ ಶಾಸಕ ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ ೭ ಮಂದಿ ದೋಷಿಗಳು ಎಂದು ನ್ಯಾ. ಸಂತೋಷ್ ಗಜಾನನ ಭಟ್ ಗುರುವಾರ ತೀರ್ಪು ನೀಡಿದ್ದರು. ಅಲ್ಲದೆ, ಶಿಕ್ಷೆ ಪ್ರಮಾಣ ಪ್ರಕಟವಾಗುವ ತನಕ ನ್ಯಾಯಾಂಗ ಬಂಧನದಲ್ಲಿಡುವAತೆ ಇಂದು ಘೋಷಿಸಿದ ಹಿನ್ನೆಲೆ ಪೊಲೀಸರು ಶಾಸಕ ಸತೀಶ್ ಸೈಲ್ರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕೊಂಡೊಯ್ದರು. ಶಾಸಕ ಸತೀಶ್ ಸೈಲ್, ಬಂದರು ಅಧಿಕಾರಿ ಮಹೇಶ್ ಬಿಳಿಯ, ಲಾಲ್ ಮಹಲ್ ಕಂಪೆನಿಯ ಮಾಲೀಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪೆನಿ ಮಾಲೀಕ ಕೆ.ವಿ. ನಾಗರಾಜ್, ಗೋವಿಂದರಾಜು, ಆಶಾಪುರ ಕಂಪೆನಿ ಮಾಲೀಕ ಚೇತನ್ ಇವರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಚನ್ನಪಟ್ಟಣದಿಂದ ನಿಖಿಲ್ - ಸಂಡೂರಿನಿAದ ಬಂಗಾರು ಹನುಮಂತು ಉಮೇದುವಾರಿಕೆ
ಬೆಂಗಳೂರು, ಅ. ೨೫: ರಾಜ್ಯದಲ್ಲಿ ಉಪಚುನಾವಣೆ ಅಖಾಡ ರಂಗೇರಿದೆ. ನಾಮಪತ್ರ ಸಲ್ಲಿಕೆಗೆ ಕಡೆಯೇ ದಿನದಂದು ರಾಮನಗರ ಜಿಲ್ಲೆ ಚನ್ನಪಟ್ಟಣದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್.ಡಿ.ಎ. ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಬಿ. ರಾಘವೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕೆಂಗಲ್ ಅಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸುವ ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು. ಅತ್ತ ಸಂಡೂರಿನಲ್ಲಿ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ತಹಶೀಲ್ದಾರ್ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶ್ರೀರಾಮುಲು ಮತ್ತಿತರ ನಾಯಕರ ಸಮ್ಮುಖದಲ್ಲಿ ಬಂಗಾರು ಹನುಮಂತು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಸಚಿವ ಜಮೀರ್ ಕಾರ್ ಮೇಲೆ ಕಲ್ಲು ತೂರಾಟ
ಹಾವೇರಿ, ಅ. ೨೫: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರ ನಡುವೆ ತಿಕ್ಕಾಟ ಶುರುವಾಗಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ ಕೆಲ ಕಾರ್ಯಕರ್ತರು ಹುಲಗೂರಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಪಕ್ಷೇತರಾಗಿ ನಾಮಪತ್ರ ಸಲ್ಲಿಸಿರುವ ಸೈಯದ್ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸಲು ಜಮೀರ್ ಅಹ್ಮದ್ ಅವರು ಮನೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಅವರು ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಅವರ ಕಾರಿನಲ್ಲಿ ಹೋಗಿದ್ದರು. ಟಿಕೆಟ್ ಕೈ ತಪ್ಪಿದ್ದರಿಂದ ಆಕ್ರೋಶಗೊಂಡಿರುವ ಸೈಯದ್ ಖಾದ್ರಿ ಪರ ಬೆಂಬಲಿಗರು, ಕಾರಿನ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳೀಯ ಮುಖಂಡರೇ ಜಮೀರ್ ಅವರನ್ನು ಪಾರು ಮಾಡಿ ವಾಪಸು ಕಳುಹಿಸಿದ್ದಾರೆ. ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನವಿತ್ತು. ಈಗ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಲೋಕಾಯುಕ್ತ ಅಧಿಕಾರಿಗಳಿಂದ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿಚಾರಣೆ
ಮೈಸೂರು, ಅ. ೨೫: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾರ್ವತಿ ಅವರನ್ನು ಕರೆಸಿ, ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೆಪ್ಟೆಂಬರ್ ೨೫ ರಂದು ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಸಿಎಂ ಸಿದ್ದರಾಮಯ್ಯ, ಪತ್ನಿ ಬಿ.ಎಂ. ಪಾರ್ವತಿ ಹಾಗೂ ಭೂಮಿ ಖರೀದಿಸಿ ಉಡುಗೊರೆ ನೀಡಿದ ಸಿದ್ದರಾಮಯ್ಯ ಬಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಭೂಮಿ ಮಾಲೀಕ ದೇವರಾಜು ಮತ್ತು ಇತರರ ವಿರುದ್ಧ ಸೆಪ್ಟೆಂಬರ್ ೨೭ ರಂದು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಒಂದು ದಿನದ ನಂತರ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಮುಡದಲ್ಲಿ ೧೪ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಈ ಎಫ್ ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಕೂಡಾ ದೂರು ದಾಖಲಿಸಿತ್ತು.
ಪೊಲೀಸ್ ಮೇಲೆ ಮಹಿಳೆಯಿಂದ ಹಲ್ಲೆ
ಬೆಂಗಳೂರು, ಅ. ೨೫: ಬೆಂಗಳೂರಿನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಬೆಂಗಳೂರಿನ ಇಂದಿರಾನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸಂಚಾರಿ ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆಯನ್ನು ಸಂಚಾರಿ ಪೊಲೀಸ್ ಪೇದೆ ನಿಲ್ಲಿಸಿ ಪ್ರಶ್ನಿಸಿದಾಗ ಆಕೆ ಸಂಘರ್ಷಕ್ಕಿಳಿದಿದ್ದಾಳೆ ಎನ್ನಲಾಗಿದೆ. ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾಲಿನಿಂದ ಒದ್ದು ಸಮವಸ್ತçದ ಕಾಲರ್ ಪಟ್ಟಿ ಹಿಡಿದಿದ್ದಾರೆ. ಇವಿಷ್ಟೂ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಪೊಲೀಸ್ ಮೇಲೆ ಮಹಿಳೆ ಹಲ್ಲೆ ಮಾಡುವ ಇಬ್ಬರು ಪೊಲೀಸರು ಹಾಗೂ ಒಂದು ಹೊಯ್ಸಳ ವಾಹನ ಕೂಡ ಇದೆ. ಆದರೂ ಯಾರೂ ಕೂಡ ಮಹಿಳೆಯನ್ನು ತಡೆಯುವ ಕೆಲಸ ಮಾಡಿಲ್ಲ. ಮಹಿಳಾ ಪೊಲೀಸರ ಬರುವಿಕೆಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ.
ಗಾಜಾ ಮೇಲೆ ಇಸ್ರೇಲ್ ದಾಳಿ : ೩೮ ಮಂದಿ ಸಾವು
ಗಾಜಾ, ಅ. ೨೫: ಗಾಜಾ ಮೇಲೆ ಇಸ್ರೇಲ್ ಮತ್ತೆ ಭೀಕರ ವೈಮಾನಿಕ ದಾಳಿ ನಡೆಸಿದ್ದು, ಖಾನ್ ಯೂನಿಸ್ನಲ್ಲಿನ ಬಹುಮಹಡಿ ವಸತಿ ಕಟ್ಟಡಗಳ ಮೇಲೆ ಶುಕ್ರವಾರ ನಡೆದ ದಾಳಿಯಲ್ಲಿ ೧೪ ಮಕ್ಕಳು ಸೇರಿದಂತೆ ಕನಿಷ್ಟ ೩೮ ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಮೃತಪಟ್ಟ ೧೪ ಮಕ್ಕಳ ಪೈಕಿ ೧೩ ಮಕ್ಕಳು ಒಂದೇ ಕುಟುಂಬದವರಾಗಿದ್ದು, ಇಸ್ರೇಲಿ ಕ್ಷಿಪಣಿಗಳಿಂದ ಹೊರಬಂದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಗಾಜಾ ಆರೋಗ್ಯ ಅಧಿಕಾರಿಗಳು ಈ ಸಾವುಗಳನ್ನು ಖಚಿತಪಡಿಸಿದ್ದು, ಬ್ಲಿಂಕೆನ್ ಶುಕ್ರವಾರ ಲಂಡನ್ನಲ್ಲಿ ಅರಬ್ ನಾಯಕರನ್ನು ಭೇಟಿಯಾಗುವ ಕೆಲವೇ ಗಂಟೆಗಳ ಮುನ್ನ ಇಸ್ರೇಲ್ ಸೇನೆ, ಆಗ್ನೇಯ ಲೆಬನಾನ್ನಲ್ಲಿ ಪತ್ರಕರ್ತರು ತಂಗಿದ್ದ ಅತಿಥಿಗೃಹದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೂವರು ಪತ್ರಕರ್ತರು ಸಾವನ್ನಪ್ಪಿದ್ದಾರೆ. ದಾಳಿಗೂ ಮುನ್ನ ಇಸ್ರೇಲ್ ಸೇನೆ ಯಾವುದೇ ಎಚ್ಚರಿಕೆ ನೀಡಿರಲಿಲ್ಲ. ಸುದ್ದಿ ಜಾಲತಾಣಗಳ ಪ್ರತಿನಿಧಿಗಳು ಮತ್ತು ಲೆಬನಾನಿನ ರಾಜಕಾರಣಿಗಳು ಇಸ್ರೇಲ್ ಯುದ್ಧ ಅಪರಾಧ ಎಸಗಿದೆ ಮತ್ತು ಉದ್ದೇಶಪೂರ್ವಕವಾಗಿ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿದ್ದ ಪತ್ರಕರ್ತರ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಹಿರಿಯ ವರದಿಗಾರ ಇಮ್ರಾನ್ ಖಾನ್ ಅವರು ಹೇಳಿದ್ದಾರೆ.