ಮಡಿಕೇರಿ, ಅ. ೨೫: ಕರ್ತವ್ಯನಿರತ ಸಂಚಾರಿ ಪೊಲೀಸ್ ಠಾಣೆಯ ಪೇದೆಯ ಮೇಲೆ ಕಾರು ಹರಿಸಲು ಯತ್ನಿಸಿದ ಚಾಲಕನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗಳೂರಿಗೆ ಸಾಗುವ ರಸ್ತೆ ಬದಿಯಲ್ಲಿ ಎರಡು ಸ್ವಿಫ್ಟ್ ಕಾರುಗಳ ನಡುವೆ ತಾ. ೨೦ರಂದು ಸಣ್ಣ ಅಪಘಾತ ಉಂಟಾಗಿದೆ. ಈ ಸಂದರ್ಭ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಎ.ಜಿ. ಸಂಜು ಅವರು ಇದನ್ನು ಗಮನಿಸಿ ಸ್ಥಳಕ್ಕೆ ಬಂದು ವಾಹನಗಳನ್ನು ತಡೆದು ಸ್ವಲ್ಪ ಪಕ್ಕಕ್ಕೆ ವಾಹನ ನಿಲ್ಲಿಸುವಂತೆ ಹೇಳಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಒಂದು ಸ್ವಿಫ್ಟ್ ಕಾರಿನ (ಕೆಎ೭೦-ಎಂ೪೭೯೦) ಚಾಲಕ ಬಂಟ್ವಾಳದ ಮುನ್ನೂರು ಗ್ರಾಮ ನಂದವಾರಕೋಟೆ ನಿವಾಸಿ ನಝೀರ್ (೨೪) ಎಂಬಾತ ಪೊಲೀಸ್ ಪೇದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸ್ ಮೇಲೆ ಕಾರು ಹತ್ತಿಸಿಕೊಂಡು ಹೋಗಲು ಯತ್ನಿಸಿ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಪರಿಣಾಮ ಪೇದೆಯ ಬಲಗಾಲಿಗೆ ಗಾಯವಾಗಿದ್ದು, ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ತಕ್ಷಣ ಸಂಪಾಜೆ ಗೇಟ್ ಬಳಿಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ, ಆತನ ಗುರುತು ಪತ್ತೆಯಾಗಿರುವುದಿಲ್ಲ.
ಅನಂತರ ಮಡಿಕೇರಿ ನಗರ ಠಾಣೆಯಲ್ಲಿ ಕಲಂ ೧೩೨, ೧೨೧(೧), ೩೫೨ ಬಿಎನ್ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಾ. ೨೪ರಂದು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಾಗೂ ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಮಹೇಶ್ ಕುಮಾರ್, ಸಿಪಿಐ ಪಿ.ಕೆ. ರಾಜು, ಪಿಎಸ್ಐ ಲೋಕೇಶ್ ಹಾಗೂ ತನಿಖಾ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.