ಪೆರಾಜೆ, ಅ. ೨೫: ಖಾಸಗಿ ಜಾಗದವರ ಅಡೆತಡೆಯಿಂದ ಪೆರಂಗಾಜೆ-ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೊಳ್ಳದೆ ೩೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ೬ ಲಕ್ಷ ಅನುದಾನದಲ್ಲಿ ಕಾಂಕ್ರೀಟೀ ಕರಣಗೊಂಡು ಫಲಾನುಭವಿಗಳ ಕನಸು-ನನಸಾಗಿದೆ.

ಪೆರಾಜೆ ಗ್ರಾಮದ ಪೆರಂಗಾಜೆ -ನೆಡ್ಚಿಲ್ ಕುಟುಂಬಸ್ಥರ ೨೫ ಮನೆಗಳಿಗೆ ಸಂಪರ್ಕಿಸುವ ರಸ್ತೆ ಸುಮಾರು ೩೦ ವರ್ಷಗಳಿಂದ ಖಾಸಗಿ ಜಾಗದವರ ಅಡೆತಡೆಯಿಂದ ಅಭಿವೃದ್ಧಿ ಕಾಣದೆ ವಾಹನ ಸವಾರರು ಸರಕು ಸಾಮಗ್ರಿಗಳನ್ನು ಸಾಗಿಸಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇಸತ್ತ ೨೫ ಮನೆಗಳ ಫಲಾನುಭವಿಗಳು ಒಟ್ಟು ಸೇರಿ ಯುವ ಕಾಂಗ್ರೆಸ್ ಮುಖಂಡ ಮನು ಪೆರುಮುಂಡ ಅವರನ್ನು ಭೇಟಿ ಮಾಡಿ ೩೦ ವರ್ಷಗಳಿಂದ ನಡೆಯುತ್ತಿರುವ ಎಲ್ಲಾ ಸಮಸ್ಯೆಗಳನ್ನು ವಿವರಿಸಿದರು.

ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿ ಮಾಡಲಾಯಿತು. ಇದೇ ವೇಳೆ ಮನು ಪೆರುಮುಂಡ ಅವರ ಮೇಲೆ ಕೊಡಗು ಸಿವಿಲ್ ಕೋರ್ಟ್ನಲ್ಲಿ ಖಾಸಗಿ ಜಾಗದ ಮಾಲೀಕರು ಸಿವಿಲ್ ದಾವೆಹೂಡಿದ್ದರು. ಈ ಬಗ್ಗೆ ಶಾಸಕರನ್ನು ಭೇಟಿಯಾದ ವೇಳೆ ದಾವೆ ಮತ್ತು ಕಾಮಗಾರಿ ಕೈಗೊಳ್ಳದಂತೆ ಕೋರ್ಟ್ ಇಂಜೆಕ್ಷನ್ ಆರ್ಡರ್ ಕೇಳಿದ್ದ ಬಗ್ಗೆ ಮನವರಿಕೆ ಮಾಡಲಾಯಿತು. ದಾಖಲೆಗಳನ್ನು ಪರಿಶೀಲಿಸಿದ ಶಾಸಕರು ಕೋರ್ಟ್ ತಡೆಯಾಜ್ಞೆ ಇಲ್ಲದೆ ಇರುವುದರಿಂದ ಕಾಮಗಾರಿ ಪೂರ್ಣಗೊಳಿಸುವಂತೆ ಮನು ಅವರಿಗೆ ಸೂಚಿಸಲಾಯಿತು. ಬಳಿಕ ೨೫ ಮನೆಗಳ ೧೦೦ಕ್ಕೂ ಅಧಿಕ ಫಲಾನುಭವಿಗಳ ಜತೆಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ೩೦ ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಫಲಾನುಭವಿಗಳಿಗೆ ವಾಹನ ಸಂಚಾರಕ್ಕೆ ಮುಕ್ತಿ ಸಿಕ್ಕಿದಂತಾಗಿದೆ.