ವೀರಾಜಪೇಟೆ, ಅ. ೨೫ : ವರ್ಷದ ೯ ತಿಂಗಳು ವರ್ಷಧಾರೆಯಿಂದ ನಲುಗುವ ಮತ್ತು ಶೇಕಡ ನೂರರಷ್ಟು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿರುವ ೧೧೦ ವರ್ಷಗಳ ಇತಿಹಾಸವಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿ. ಬಾಡಗ ಶಾಲೆ ೨೦೨೪ -೨೫ ನೇ ಸಾಲಿನ ‘ಆದರ್ಶ ಶೈಕ್ಷಣಿಕ ಸಂಸ್ಥೆ' ಎಂಬ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ.

ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಬೆಂಗಳೂರಿನ ಕೊಂಡಜ್ಜಿ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

೧೧೦ ವರ್ಷಗಳ ಇತಿಹಾಸ

೧೯೧೪-೧೫ನೇ ಸಾಲಿನಲ್ಲಿ ಸ್ಥಾಪನೆಯಾದ ೧೧೦ ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯು ವಿ. ಬಾಡಗ ಗ್ರಾಮಸ್ಥರ ಸಹಕಾರದಿಂದ ಉಳಿದು ಬೆಳೆಯುತ್ತಾ ಬಂದಿದ್ದು ಈ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ೪೭ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಈ ಗ್ರಾಮದಲ್ಲಿ ಸರಕಾರಿ ಶಾಲೆಯ ಉಳಿವಿಗೆ ಹಿರಿಯ ವಿದ್ಯಾರ್ಥಿಗಳ ಸಂಘ, ಸ್ಥಳೀಯ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ. ಮತ್ತು ಶಾಲಾ ಶಿಕ್ಷಕ ವೃಂದ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ.

ಬೆಳೆಗಾರರೇ ವಿದ್ಯಾರ್ಥಿಗಳನ್ನು ಕರೆತರುವುದು

ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳೇ ಇರುವ ಕಾರಣ ಶೇ.೯೦ ರಷ್ಟು ಪೋಷಕರಲ್ಲಿ ಶಿಕ್ಷಣದ ಕುರಿತು ಯಾವುದೇ ಜಾಗೃತಿ, ಆಸಕ್ತಿ ಇಲ್ಲದೆ ಇದ್ದರೂ ಊರಿನ ಬೆಳೆಗಾರರು ಮತ್ತು ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ವಿದ್ಯಾರ್ಥಿಗಳನ್ನು ಶಾಲೆಯವರೆಗೆ ತಮ್ಮ ಸ್ವಂತ ವಾಹನದಲ್ಲಿ ಕರೆದುಕೊಂಡು ಬಂದು ಸಂಜೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ವಿದ್ಯಾರ್ಥಿಗಳು ಪದೇ ಪದೇ ಗೈರು ಹಾಜರಾಗುತ್ತಿರುವುದನ್ನು ತಪ್ಪಿಸಲು ಶಾಲಾ ಶಿಕ್ಷಕರು ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಹಾಜರಾತಿಗೆ ಸಮಾಧಾನಕರ ಬಹುಮಾನವನ್ನು ನೀಡುತ್ತಿದ್ದು, ಪೋಷಕರು ಇರುವ ಮನೆಯ ಮಾಲೀಕರ ಸಹಕಾರದಿಂದ ೨೦೨೩-೨೪ ನೇ ಸಾಲಿನಿಂದ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಣನೀಯವಾಗಿ ಹೆಚ್ಚಾಗಿದ್ದು ಈ ಕುರಿತು ಊರ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದಾನಿಗಳ ಸಹಕಾರ

ಊರಿನ ಹಲವು ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರ ಮೇಲಿನ ಅಭಿಮಾನಕ್ಕೆ ಹಲವು ವಸ್ತುಗಳು ಮತ್ತು ಹಣದ ಸಹಾಯ ದಾನದ ರೂಪದಲ್ಲಿ ಶಾಲೆಗೆ ಒದಗಿ ಬಂದಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ನೋಟ್ ಬುಕ್ ಯಾವುದನ್ನು ಮನೆಗೆ ನೀಡಿದರೂ ಹಿಂದಿರುಗಿ ಬರದೇ ಇರುವ ಕಾರಣ ಲೇಖನ ಸಾಮಗ್ರಿಗಳು ಮತ್ತು ಬ್ಯಾಗ್‌ಗಳನ್ನು ಶಾಲೆಯಲ್ಲಿಯೇ ಇರಿಸಿ ಪ್ರತಿದಿನ ಮಕ್ಕಳಿಗೆ ಒದಗಿಸಿ ಕಲಿಕೆಯಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುತ್ತಿರುವುದು ನಿಜಕ್ಕೂ ಅವರ ಶ್ರಮಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಸ್ವಚ್ಛತೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು ತಂಡದಲ್ಲಿ ಉಗುರು ಕತ್ತರಿಸುವುದು ಹಾಗೂ ವಿದ್ಯಾರ್ಥಿಗಳ ಕೂದಲು ಕತ್ತರಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಹಳೆ ವಿದ್ಯಾರ್ಥಿ ಸಂಘದ ಆಸಕ್ತಿ

ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ ಇಬ್ಬರು ಖಾಯಂ ಶಿಕ್ಷಕರು ಮತ್ತು ಇಲಾಖೆಯಿಂದ ನೀಡಿರುವ ಇಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕಂಜಿತAಡ ಗಿಣಿ ಮೊಣ್ಣಪ್ಪ ಮತ್ತು ಸದಸ್ಯರು ಶಾಲಾ ಆವರಣದ ಕಾಡು ಕಡಿಸುವುದು, ಶಾಲೆಗೆ ಬೇಕಾದ ತುರ್ತು ಸೌಲಭ್ಯಗಳನ್ನು ಒದಗಿಸುವುದು ಇತ್ಯಾದಿ ಸಹಕಾರದೊಂದಿಗೆ ತಾವು ಓದಿದ ಶಾಲೆಯ ಬಗ್ಗೆ ಅಭಿಮಾನದಿಂದ ಒತ್ತಾಸೆಯಾಗಿ ನಿಂತಿದ್ದಾರೆ.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾಂಜಲಿ ಈ ಹಿಂದೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾವು ಶಾಲಾ ಶಿಕ್ಷಕರಿಗೆ ನೀಡಿದ ಮಾರ್ಗದರ್ಶನದಂತೆ ಪಟ್ಟು ಬಿಡದೆ ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಶಾಲಾ ಭೌತಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರಾಮಾಣಿಕ

(ಮೊದಲ ಪುಟದಿಂದ) ಶ್ರಮ ವಹಿಸುತ್ತಿದ್ದು ಇವರಿಗೆ ಶಾಲಾ ಸಹ ಶಿಕ್ಷಕಿ ಕಾವೇರಮ್ಮ ಕೂಡ ಜೊತೆಯಾಗಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ಶಾಲಾ ಅತಿಥಿ ಶಿಕ್ಷಕರು ತಮಗೆ ಸಿಗುವ ಅತ್ಯಲ್ಪ ಸಂಬಳದಲ್ಲಿ ಶಾಲೆಗಾಗಿ ಉತ್ತಮವಾಗಿ ದುಡಿಯುತ್ತಿದ್ದು ಸರಕಾರಿ ಶಾಲೆಯಲ್ಲಿ ಆಗುತ್ತಿರುವ ಇಂತಹ ಬದಲಾವಣೆಗಳು ನಿಜಕ್ಕೂ ಎಲ್ಲಾ ಶಾಲೆಗಳಿಗೂ ಮಾದರಿಯಾಗಿದೆ.

ಗ್ರಾಮಸ್ಥರ ಸಂಭ್ರಮ

೨೦೨೪- ೨೫ ನೇ ಸಾಲಿನಲ್ಲಿ ತಮ್ಮ ಗ್ರಾಮದ ಶಾಲೆಗೆ ಆದರ್ಶ ಶೈಕ್ಷಣಿಕ ಸಂಸ್ಥೆ ಎಂಬ ಪ್ರಶಸ್ತಿ ದೊರೆತಿರುವ ಕುರಿತು ಗ್ರಾಮಸ್ಥರು ಸಂಭ್ರಮದಲ್ಲಿದ್ದಾರೆ. ಶಿಕ್ಷಕರ ಕೋರಿಕೆಯಂತೆ ಹಿರಿಯ ವಿದ್ಯಾರ್ಥಿಗಳ ಸಂಘದಿAದ ಶಾಲೆಗೆ ಅಂದಾಜು ಒಂದು ಲಕ್ಷ ರೂಪಾಯಿಯಲ್ಲಿ ಸುಣ್ಣ ಬಣ್ಣ ಒದಗಿಸುವ ಕ್ರಿಯಾಯೋಜನೆ ಕೂಡ ತಯಾರಾಗಿದೆ.

ಪ್ರತಿ ವರ್ಷ ಈ ಶಾಲೆಯಲ್ಲಿ ಹೈ ಫ್ಲೆöÊಯರ್ಸ್ ತಂಡದ ವತಿಯಿಂದ ಹಾಕಿ ಮ್ಯಾಚ್ ನಡೆಯುತ್ತಿದ್ದು ಅಂದಾಜು ಒಂದು ಎಕರೆ ವಿಸ್ತೀರ್ಣವಿರುವ ಶಾಲಾ ಆಟದ ಮೈದಾನವನ್ನು ಅವರೇ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣನವರು ಹಾಕಿ ಪಂದ್ಯಾಟದ ಸಂದರ್ಭದಲ್ಲಿ ಈ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಪ್ರಶಸ್ತಿ ಬಂದಿರುವ ಕುರಿತು ಅಭಿನಂದನಾ ಸಂದೇಶವನ್ನು ಕೂಡ ಕಳುಹಿಸಿದ್ದಾರೆ.

ಸರಕಾರದ ಮೂಲ ಉದ್ದೇಶವಾದ ಶಿಕ್ಷಣ ಪ್ರತಿಯೊಬ್ಬರ ಹಕ್ಕು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ತಲುಪಲೇಬೇಕು ಎಂಬ ಸರಕಾರದ ಉದ್ದೇಶವನ್ನು ಈಡೇರಿಸುವಲ್ಲಿ ಈ ಶಾಲೆ ಸಫಲವಾಗಿರುವುದು ಗಮನಾರ್ಹವಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಕರು ಪಡುತ್ತಿರುವ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಕ್ಕೆ ಈ ಶಾಲೆ ಒಂದು ನಿದರ್ಶನವಾಗಿದೆ.