ಮಡಿಕೇರಿ, ಅ. ೨೬: ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಮಂಜೂರುಗೊAಡಿದ್ದ ಅನುದಾನ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಗೀತಾಬಾಯಿ ಆದೇಶ ಹೊರಡಿಸಿದ್ದಾರೆ.

ಮಡಿಕೇರಿ ದಸರಾ ಉತ್ಸವಕ್ಕೆ ರೂ. ೧.೫೦ ಕೋಟಿ, ಗೋಣಿಕೊಪ್ಪ ದಸರಾಕ್ಕೆ ರೂ. ೭೫ ಲಕ್ಷ ಅನುದಾನ ಈ ಹಿಂದೆ ಘೋಷಣೆಯಾಗಿತ್ತು. ಆದರೆ, ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆಗೊಂಡಿರಲಿಲ್ಲ. ಇದೀಗ ಹಣವನ್ನು ಬಿಡುಗಡೆಗೊಳಿಸುವಂತೆ ಸರಕಾರÀ ಆದೇಶ ಹೊರಡಿಸಿದೆ.

ಮೈಸೂರು ದಸರಾ ಮತ್ತು ರಾಜ್ಯೋತ್ಸವ ಪ್ರಶಸ್ತಿಯಡಿಯಲ್ಲಿ ಲಭ್ಯವಿದ್ದ ರೂ ೫.೮೯ ಕೋಟಿ ಹಾಗೂ ಹೆಚ್ಚುವರಿಯಾಗಿ ಒದಗಿಸಿದ್ದ ರೂ. ೧೯.೧೧ ಕೋಟಿ ಸೇರಿದಂತೆ ಒಟ್ಟು ರೂ. ೨೫ ಕೋಟಿ ಹಣವನ್ನು ಮೈಸೂರು ದಸರಾ ಆಚರಣೆ ವೆಚ್ಚಗಳಿಗಾಗಿ ಮೈಸೂರು ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಿರುವ ಅನುದಾನ ಮಿತಿಯಲ್ಲಿಯೇ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾಕ್ಕೆ ನಿಗದಿಗೊಂಡಿದ್ದ ಅನುದಾನವನ್ನು ಮೈಸೂರು ಜಿಲ್ಲಾಧಿಕಾರಿಯಿಂದ ಕೊಡಗು ಜಿಲ್ಲಾಧಿಕಾರಿಗೆ ವರ್ಗಾಯಿಸಲು ಸರಕಾರ ಮಂಜೂರಾತಿ ನೀಡಿದೆ ಎಂದು ಆದೇಶದಲ್ಲಿ ಗೀತಾಬಾಯಿ ತಿಳಿಸಿದ್ದಾರೆ.

ಮಂಜೂರು ಮಾಡಿದ ಅನುದಾನ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಅನುದಾನ ಸಮರ್ಪಕವಾಗಿ ಬಳಕೆಯಾದ ಬಗ್ಗೆ ಲೆಕ್ಕಪರಿಶೋಧಕರಿಂದ ಲೆಕ್ಕಪಟ್ಟಿ ಹಾಗೂ ಹಣಬಳಕೆ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು, ಕಾರ್ಯಕ್ರಮ ನಡೆದ ಬಗ್ಗೆ ಜಿಲ್ಲಾಧಿಕಾರಿ ಖಾತ್ರಿಪಡಿಸಿಕೊಳ್ಳಬೇಕು ಎಂಬ ಷರತ್ತುಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.