ಮಡಿಕೇರಿ, ಅ. ೨೬: ವಿದ್ಯಾರ್ಥಿಗಳು ಯಾವುದೇ ಕಾರ್ಯವನ್ನು ದೃಢ ವಿಶ್ವಾಸದಿಂದ ಮಾಡಬೇಕು ಮತ್ತು ಕಂಡ ಕನಸನ್ನು ನನಸು ಮಾಡಿಕೊಳ್ಳಲು ಶ್ರಮವಹಿಸಬೇಕು. ಆಗ ಮಾತ್ರ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ಕರ್ನಲ್ ಕೆ.ಸಿ. ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ರೋಟರಿ ಸಭಾಂಗಣದಲ್ಲಿ ನಡೆದ ರೀಬಿಲ್ಡ್ ಕೊಡಗು ಸಂಸ್ಥೆ (ಟೈಮ್ ಟು ಗಿವ್ ಬ್ಯಾಕ್ ಚಿಟಿಜ ಜಾಯ್ ಆಫ್ ಗಿವಿಂಗ್)ಯ ೬ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಜನರ ಸಮಸ್ಯೆಗಳನ್ನು ಅರಿತು ಅವರ ಅವಶ್ಯಕತೆಗಳಿಗೆ ಸ್ಪಂದಿಸಿರುವುದು ಶ್ಲಾಘನೀಯ. ಅನೇಕ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಕೆ.ಎ.ಕುಶಾಲಪ್ಪ ಅವರು ಕೊಡಗಿನ ಜನತೆಗೆ ಏಕಾಂಗಿಯಾಗಿ ಪರಿಹಾರವನ್ನು ಒದಗಿಸಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದಾರೆ. ಇವರ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿಯಾಗಿದೆ. ಈ ಸೇವೆ ನಿರಂತರವಾಗಿ ನಡೆಯಲಿ ಎಂದು ಕೆ.ಸಿ. ಸುಬ್ಬಯ್ಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೀಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ. ಕುಶಾಲಪ್ಪ (ಕೇಳಪಂಡ), ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂಬ ಕೀಳರಿಮೆಯನ್ನು ಬಿಟ್ಟು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತಾವು ಕಲಿತ ಶಾಲೆ, ಶಿಕ್ಷಕರು ಹಾಗೂ ಉತ್ತಮ ಕೆಲಸಕ್ಕೆ ಪ್ರೇರೇಪಿಸಿದವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ಕೆಲಸದಲ್ಲಾದರೂ ಸ್ವಾರ್ಥವನ್ನು ಬಿಟ್ಟು ಸಹಕಾರ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ೨೦೧೮-೧೯ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ರೀಬಿಲ್ಡ್ ಕೊಡಗು ಸಂಸ್ಥೆ ಹುಟ್ಟಿಕೊಂಡಿದ್ದು, ಸಂಸ್ಥೆಯ ಮೂಲಕ ನಿರಂತರವಾಗಿ ಸಮಾಜಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರವಾಹ ಪೀಡಿತರಿಗೆ ತಾತ್ಕಾಲಿಕ ಆಶ್ರಯ, ಆಹಾರ, ದಿನಸಿ, ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಲು ಸಾಧ್ಯವಾಯಿತು. ಎಂದು ಹೇಳಿದರು.

ರೋಟರಿ ಅಧ್ಯಕ್ಷ ಸುದಯ್ ನಾಣಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ಸಂಬAಧಗಳಿಗೆ, ಜ್ಞಾನಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮೊದಲು ವಯಸ್ಸು, ಸಂಬAಧ, ಜ್ಞಾನ ನಂತರ ಹಣಕ್ಕೆ ಬೆಲೆ ನೀಡಬೇಕು, ಆಗ ಬದುಕು ಸುಂದರವಾಗಿರುತ್ತದೆ ಎಂದÀರು.

ಇನ್ನರ್ ವೀಲ್ ಅಧ್ಯಕ್ಷ ಅಗ್ನೇಸ್ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಗುರಿ ಸಾಧಿಸಬೇಕು. ಪೋಷಕರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.

ಬೆಂಗಳೂರಿನ ರೀಇನ್‌ವೆಂಟ್ ಅಪಾರಲ್ಸ್ ನ ನಿರ್ದೇಶಕರಾದ ಅಭಿತಾ ಜೈನ್ ಬಾಬೆಲ್, ರೋಟರಿ, ಇನ್ನರ್ ವೀಲ್ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇನ್ನರ್ ವೀಲ್ ಖಜಾಂಚಿ ದಿವ್ಯ ಮುತ್ತಣ್ಣ ಸ್ವಾಗತಿಸಿ, ನಿರೂಪಿಸಿದರು. ರೀಬಿಲ್ಡ್ ಕೊಡಗು ಸಂಸ್ಥೆಯ ಸಂಸ್ಥಾಪಕ ಕೆ.ಎ. ಕುಶಾಲಪ್ಪ ವಂದಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಅರೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು ೬೦ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್ ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.