ಕೂಡಿಗೆ, ಅ. ೨೬: ಆಸ್ತಿ ವಿಚಾರದಲ್ಲಿ ವ್ಯಕ್ತಿಯ ಮೇಲೆ ಹಲ್ಲೆಗೈದು ಕತ್ತಿಯಿಂದ ಕಡಿದ ಘಟನೆ ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾಮದಲ್ಲಿ ನಡೆದಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಗುಳಿಗ ಪೈಸಾರಿ ನಿವಾಸಿ ಎಂ. ಮಂಜುನಾಥ್ (೫೬) ಎಂಬವರು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ, ಪಕ್ಕದ ಮನೆಯಲ್ಲಿ ವಾಸವಿರುವ ಅವರ ತಂಗಿ ಜಾನಕಿ ಮತ್ತು ಆಕೆಯ ಮಕ್ಕಳಾದ ಸುಜಿತ್, ಸುಜೇಶ್ ಹಾಗೂ ಸಂದೀಪ್ ಅವರು ಹಲ್ಲೆ ಮಾಡಿದ್ದಾರೆ. ಸುಜಿತ್ ಕತ್ತಿಯಿಂದ ಮಂಜುನಾಥ್ ತಲೆಗೆ ಮತ್ತು ಕಾಲಿಗೆ ಕಡಿದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಗಾಯಾಳುವನ್ನು ಸ್ಥಳೀಯರು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಿಂದೆಯೂ ಕೂಡ ಇವರುಗಳ ನಡುವೆ ಆಸ್ತಿ ವಿಚಾರದಲ್ಲಿ ಕಲಹ ಏರ್ಪಟ್ಟಿತ್ತು ಎಂದು ಹೇಳಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.