ಮೈಸೂರು, ಅ. ೨೬: ಒಂದೇ ದೃಷ್ಟಿಕೋನದ ವ್ಯಕ್ತಿಗಳು ರಚಿಸಿರುವ ಪಠ್ಯ ಪುಸ್ತಕಗಳನ್ನೇ ನಾವೆಲ್ಲರೂ ಬಾಲ್ಯದಿಂದಲೂ ಓದಿಕೊಂಡು ಬಂದಿದ್ದೇವೆ. ಆದರೆ ಸರಿಯಾದ ಇತಿಹಾಸ ತಿಳಿಯುವ ನಿಟ್ಟಿನಲ್ಲಿ ಯತ್ನ ಮಾಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಮೈಸೂರು ನಗರದ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಅಯೋಧ್ಯ ಪಬ್ಲಿಕೇಷನ್ ಪ್ರಕಟಿಸಿರುವ, ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಇಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಷಯದ ಬಗ್ಗೆ ನೂರಾರು ಜನ ತಮ್ಮ ಅಭಿಪ್ರಾಯ ಹಂಚಿಕೊAಡಿರುತ್ತಾರೆ. ಆದರೆ, ಇದರಲ್ಲಿ ಯಾವುದು ಸತ್ಯ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಹಂಚಿಕೊAಡ ಎಲ್ಲ ಅಭಿಪ್ರಾಯವೂ ಸತ್ಯ ಆಗಲ್ಲ. ಅದನ್ನು ನಾವು ಪರಾಮರ್ಶೆ ಮಾಡಬೇಕು ಎಂದು ಯದುವೀರ್ ಹೇಳಿದರು.

ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ಎಲ್ಲವನ್ನೂ ಒಪ್ಪುತ್ತೇನೆ ಅಥವಾ ಎಲ್ಲವನ್ನೂ ಒಪ್ಪುವುದಿಲ್ಲ ಎಂಬ ಧೋರಣೆ ಬೇಡ. ‘ಸತ್ಯವನ್ನೇ ಹೇಳುತ್ತೇನೆ’ ನಾಟಕವನ್ನು ಓದಿ. ಇಷ್ಟು ದಿನ ಕೊಟ್ಟ ಇತಿಹಾಸ ಒಪ್ಪಿಕೊಂಡು ಬಂದಿದ್ದೇವೆ. ಇಂತಹ ಸಾಹಸಕ್ಕೆ ಕೈ ಹಾಕಬೇಕು. ನಮಗೆ ಪ್ರಶ್ನೆ ಮಾಡಲು ಬರಬೇಕು. ಪುಸ್ತಕದಲ್ಲಿ ಹಾಗೂ ನಾಟಕ ಪ್ರದರ್ಶನದಲ್ಲಿ ವ್ಯತ್ಯಾಸವಿರುತ್ತದೆ. ಎಸ್.ಎಲ್. ಭೈರಪ್ಪ ಅವರ ‘ಪರ್ವ’ ದಲ್ಲೂ ಈ ಅನುಭವವಾಗಿದೆ. ನಾಟಕದ ಆಶಯ ಪ್ರೇಕ್ಷಕ ವರ್ಗಕ್ಕೆ ತಟ್ಟುವ ರೀತಿ ಬೇರೆಯೇ ಇರುತ್ತದೆ ಎಂದರು.

ರಂಗಾಯಣದ ಮಾಜಿ ನಿರ್ದೇಶಕ ಲೇಖಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಈ ಪುಸ್ತಕದ ಪಾತ್ರಗಳಾಗಿರುವ ಎಲ್ಲ ನಾಯಕರ ಸಂಭಾಷಣೆಗೂ ಆಧಾರಗಳಿವೆ. ಚರಿತ್ರೆ ಎಂದಿಗೂ ಭೂಗರ್ಭದಲ್ಲಿ ಅವಿತಿರಬಾರದು. ಅದು ಸ್ಫೋಟಿಸಬೇಕು. ಸತ್ಯಚರಿತ್ರೆಯ ಅನಾವರಣವೇ ‘ಸತ್ಯವನ್ನೇ ಹೇಳುತ್ತೇನೆ’ ನಾಟಕವಾಗಿದೆ ಎಂದರು.

ಈ ಪುಸ್ತಕದಲ್ಲಿ ಬರುವ ಆರು ಮಹನೀಯರು ಸತ್ಯವನ್ನೇ ಹೇಳಿದ್ದಾರೆ. ೪೩ ಪುಸ್ತಕಗಳನ್ನು ಇದಕ್ಕಾಗಿ ಅಧ್ಯಯನ ಮಾಡಿದ್ದೇನೆ. ಚರಿತ್ರೆಯ ಅಂಶಗಳೇ ಇಲ್ಲಿವೆ. ನನ್ನದೇನೂ ಇಲ್ಲ. ಒಂದು ವೇಳೆ ಈ ಪುಸ್ತಕಕ್ಕೆ ಸಮಸ್ಯೆಯಾದರೆ ಹಿಂದೆ ಅಧ್ಯಯನ ಮಾಡಿದ ಅಷ್ಟೂ ಪುಸ್ತಕಗಳಿಗೆ ಸಮಸ್ಯೆಯಾಗಲಿದೆ ಎಂದರು. ಶಾಸಕ ಶ್ರೀವತ್ಸ, ಡಾ.ಚಂದ್ರಶೇಖರ್, ಅನಿತಾ ಕಾರ್ಯಪ್ಪ, ಪುನೀತ್ ಕೆರೆಹಳ್ಳಿ, ಆರ್‌ಎಸ್‌ಎಸ್ ಅನಂತ ಕೃಷ್ಣ, ಅಕ್ಷಯ ರಾಜೇಂದ್ರ ಮತ್ತಿತರರಿದ್ದರು.