ಮಡಿಕೇರಿ, ಅ. ೨೬: ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ದಾಖಲೆಯ ೧೦೦ನೇ ಪುಸ್ತಕವನ್ನು ನ. ೨೪ ರಂದು ಅದ್ದೂರಿಯಾಗಿ ಲೋಕಾರ್ಪಣೆ ಗೊಳಿಸಲಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ ೯೮ನೇ ಪುಸ್ತಕ, ಲೇಖಕಿ ಡಾ. ದೀಪ ನರೇಂದ್ರ ಬಾಬು ಅವರು ರಚಿಸಿರುವ "ಗುಳೆ" ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡವ ಮಕ್ಕಡ ಕೂಟದ ದಾಖಲೆಯ ೧೦೦ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಸಂಪಾದಕತ್ವದ "ನೂರನೆ ಮೊಟ್ಟ್" ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಬಿಡುಗಡೆಯಾಗಲಿದ್ದು, ಇದರೊಂದಿಗೆ ಲೇಖಕರಾದ ಐಚಂಡ ರಶ್ಮಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನಿರ ಟೀನಾ ಚಂಗಪ್ಪ, ಯಶೋಧ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ.
ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕöÈತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯ ನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೯೮ ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ.
ಅವುಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಕೊಡಗಿಗೆ ಕಾರ್ಮಿಕರಾಗಿ ವಲಸೆ ಬರುವವರ ಜೀವನವನ್ನು ಅಧ್ಯಯನ ನಡೆಸಿ ವಿಶ್ಲೇಷಣೆ ಮಾಡಿದ್ದಾರೆ. ದೈವರಾಧನೆ, ಸಂಪ್ರದಾಯದ ಬಗ್ಗೆ ಕಾದಂಬರಿಯಲ್ಲಿ ವಿವರಿಸಲಾಗಿದ್ದು, ಸುಲಲಿತವಾಗಿ ಓದಬಹುದಾಗಿದೆ ಮತ್ತು ಪ್ರತಿಯೊಬ್ಬರು ಓದಲೇ ಬೇಕಾದ ಪುಸ್ತಕವಾಗಿದೆ ಎಂದರು.
ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟ ದಾಖಲೆಯ ೧೦೦ನೇ ಪುಸ್ತಕವನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಮತ್ತಷ್ಟು ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತಾಗಲಿ ಎಂದು ಹಾರೈಸಿದರು.
ಪುಸ್ತಕದ ಲೇಖಕಿ ಡಾ. ದೀಪ ನರೇಂದ್ರ ಬಾಬು ಮಾತನಾಡಿ, ಗುಳೆ ಎನ್ನುವುದು ಆಳವಾದ ವಿಚಾರ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ವಲಸೆ ಹೋದವರು.
ವಿಜ್ಞಾನ, ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಎಲ್ಲಿ ಅವಕಾಶಗಳಿದೆ ಅಲ್ಲಿಗೆ ವಲಸೆ ಹೋಗುವಂತಾಗಿದೆ. ಆಧುನಿಕತೆ ಬೆಳೆದಂತೆ ಹಿಂದಿನ ಪದಬಳಕೆಗಳು ಮರೆಯಾಗುತ್ತಿದ್ದು, ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪುಸ್ತಕಕ್ಕೆ ಗುಳೆ ಎಂಬ ಹೆಸರಿಡಲಾಗಿದೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಪುಸ್ತಕವಾಗಿದ್ದು, ಅತ್ಯುತ್ತಮ ಕೃತಿಯಾಗಿದೆ ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು ಮಾತನಾಡಿ, ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವುದು ಕನ್ನಡಕ್ಕೆ ಕೊಟ್ಟ ಕೊಡುಗೆ ಎಂದರು.
ಕೊಡವ ಮತ್ತು ಕನ್ನಡ ಚಲನಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಲೇಖಕಿ ಡಾ. ದೀಪ ನರೇಂದ್ರ ಬಾಬು ಕಾರ್ಮಿಕರ ಬದುಕನ್ನು ಪುಸ್ತಕದ ಮೂಲಕ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಕಾರ್ಮಿಕರ ಸುಖ, ದುಖಃಗಳನ್ನು ಸ್ವಾರಸ್ಯಕರವಾಗಿ ರಚಿಸಿದ್ದಾರೆ ಎಂದರು.
ಕೊಡವ ಮಕ್ಕಡ ಕೂಟದಿಂದ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದು, ಮತ್ತಷ್ಟು ಹೊಸ ಪ್ರತಿಭೆಗಳು ಹೊರಬರುವಂತಾಗಲಿ ಆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲಿ ಎಂದು ಹಾರೈಸಿದರು.