ಮಡಿಕೇರಿ, ಅ. ೨೬: ಮಹಿಳೆ ಯೊಬ್ಬಳು ಹಣಕ್ಕಾಗಿ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ಪತಿಯನ್ನು ಹತ್ಯೆಗೈದು ಸುಟ್ಟು ಹಾಕಿದ್ದ ಪ್ರಕರಣ ವನ್ನು ಪೊಲೀಸರು ಭೇದಿಸಿದ್ದು, ಮೂವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಮ್ಮ ಕಚೇರಿ ಸಭಾಂಗಣದಲ್ಲಿ ಮಾಹಿತಿ ನೀಡಿದರು. ತಾ. ೮ ರಂದು ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪನ್ಯ ಎಸ್ಟೇಟ್ ಎಂಬಲ್ಲಿ ಸಂದೇಶ್ ಎಂಬವರ ಕಾಫಿ ತೋಟದಲ್ಲಿ ಅರ್ಧಂಬರ್ಧ ಬೆಂದ ಸ್ಥಿತಿಯಲ್ಲಿ ಗಂಡಸಿನ ಶವವೊಂದು ಪತ್ತೆಯಾಗಿತ್ತು. ಅರ್ಧ ಸುಟ್ಟು ಕರಕಲಾಗಿದ್ದ ಮೃತದೇಹ ಯಾರದ್ದು ಎಂಬುದನ್ನು ಪತ್ತೆಹಚ್ಚುವುದು ಪೊಲೀಸ್ ಇಲಾಖೆಗೆ ಸವಾಲಾಗಿತ್ತು.
ಈ ಹಿನ್ನೆಲೆಯಲ್ಲಿ ತಾಂತ್ರಿಕ ಹಾಗೂ ವೈಜ್ಞಾನಿಕ ರೀತಿಯಲ್ಲಿ ೫೦೦ಕ್ಕೂ ಹೆಚ್ಚು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಾಹನಗಳ ಓಡಾಟ, ಮೊಬೈಲ್ ಕರೆಗಳ ಜಾಡು ಹಿಡಿದು ತನಿಖೆ ನಡೆಸಿ ಸಂಶಯಾಸ್ಪದ ಕಂಡು ಬಂದ ಕಾರೊಂದರ ಮಾಹಿತಿ ಸಂಗ್ರಹಕ್ಕೆ ಮುಂದಾದಾಗ ಮೃತ ವ್ಯಕ್ತಿ ಹೈದರಾಬಾದಿನ ರಮೇಶ್ ಕುಮಾರ್ (೫೪) ಎಂಬುದು ಪತ್ತೆಯಾಗಿದ್ದು, ಹಣಕ್ಕಾಗಿ ಆತನ ಪತ್ನಿಯೇ ಆಕೆಯ ಗೆಳೆಯರೊಂದಿಗೆ ಸೇರಿ ರಮೇಶ್ ಕುಮಾರ್‌ನನ್ನು ಹತ್ಯೆ ಮಾಡಿ ಕಾಫಿ ತೋಟದಲ್ಲಿ ಸುಟ್ಟುಹಾಕಿರುವುದು ಬಯಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಮೃತ ವ್ಯಕ್ತಿಯ ಪತ್ನಿ ತೆಲಂಗಾಣ ರಾಜ್ಯದ ಯಾದಾದ್ರಿ ಜಿಲ್ಲೆಯ ಮೋಂಗಿರ್ ನಗರದವ ಳಾಗಿದ್ದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ವಾಸವಿದ್ದ ಪಿ. ನಿಹಾರಿಕ (೨೯), ಆಂಧ್ರಪ್ರದೇಶದ ಕಡಪ ಜಿಲ್ಲೆಯ ವಾಸವಿ ನಗರದವನಾಗಿದ್ದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿದ್ದ ನಿಖಿಲ್ ಮೈರೆಡ್ಡಿ (೨೮), ಹರಿಯಾಣ ರಾಜ್ಯದ ಕಾರ್ನಲ್‌ಗರುಂದ ನಿವಾಸಿ ಅಂಕುರ್ ರಾಣಾ (೩೦) ಎಂಬವರುಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಮಾಹಿತಿಯಿತ್ತರು.
ಘಟನೆಯ ವಿವರ
ನಿಹಾರಿಕಾಗೆ ೧೬ನೆ ವಯಸ್ಸಿ ನಲ್ಲಿಯೇ ವಿವಾಹವಾಗಿದ್ದು, ಮೊದಲ ಪತಿಗೆ ವಿಚ್ಛೇದನ ನೀಡಿದ್ದ ಆಕೆ ಬಳಿಕ ಕಮಲ್ ದೀಪ್ ಸೈನಿ ಎಂಬಾತ ನೊಂದಿಗೆ ಸಂಬAಧವಿರಿಸಿ ಕೊಂಡಿದ್ದಳು. ಈ ಸಂದರ್ಭದಲ್ಲಿ ಆತನಿಗೆ ಹಣಕಾಸಿನ ವಿಚಾರದಲ್ಲಿ ಮೋಸ ಮಾಡಿ ಹರಿಯಾಣದಲ್ಲಿ ಜೈಲು ಪಾಲಾಗಿದ್ದಳು. ಅಲ್ಲಿ ಆಕೆಗೆ ಅಂಕುರ್ ರಾಣಾನ ತಾಯಿಯ ಮೂಲಕ ಅಪರಾಧ ಹಿನ್ನೆಲೆಯಿದ್ದ ಅಂಕುರ್ ರಾಣಾನ ಪರಿಚಯವಾಗಿತ್ತು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್‌ಕುಮಾರ್‌ನನ್ನು ಮದುವೆ ಯಾಗಿದ್ದ ನಿಹಾರಿಕಾ ಪಶುವೈದ್ಯ ನಾಗಿದ್ದ ಅವಿವಾಹಿತ ನಿಖಿಲ್ ಮೈ ರೆಡ್ಡಿ ಎಂಬಾತನೊAದಿಗೆ ಸಂಬAಧ ಹೊಂದಿದ್ದಳು.
ತನ್ನ ನಾಯಿಯನ್ನು ಆರೋಗ್ಯ ತಪಾಸಣೆಗೆ ನಿಖಿಲ್ ಮೈ ರೆಡ್ಡಿಯ ಕ್ಲಿನಿಕ್‌ಗೆ ಕರೆದೊಯ್ಯುತ್ತಿದ್ದರಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನಿಖಿಲ್‌ನೊಂದಿಗೆ ಸೇರಿ ಶ್ವಾನಪಾಲನಾ ಕೇಂದ್ರ ನಡೆಸುತ್ತಿದ್ದ ನಿಹಾರಿಕ ಅದಕ್ಕೂ ಮೊದಲು ವಿವಿಧ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಳು. ರಮೇಶ್‌ಕುಮಾರ್‌ಗೂ ಈ ಮೊದಲೇ ಮದುವೆಯಾಗಿದ್ದರೂ ನಿಹಾರಿಕಾಳನ್ನು ಎರಡನೇ ವಿವಾಹವಾಗಿದ್ದ.
ಈ ನಡುವೆ ನಿಹಾರಿಕಾ ತನ್ನ ಆಸ್ತಿಯನ್ನು
(ಮೊದಲ ಪುಟದಿಂದ) ರಮೇಶ್ ಕುಮಾರ್‌ಗೆ ಮಾರಿದ್ದಳು ಎನ್ನಲಾಗಿದ್ದು, ಅದರ ಮೊತ್ತ ರೂ. ೮ ಕೋಟಿ ಹಣವನ್ನು ರಮೇಶ್‌ಕುಮಾರ್ ತನಗೆ ನೀಡಲಿಲ್ಲ ಎಂಬ ಕಾರಣಕ್ಕಾಗಿ ಅಂಕುರ್ ರಾಣಾನನ್ನು ಹೈದರಾಬಾದ್‌ಗೆ ಬರಲು ಹೇಳಿ ರಮೇಶ್ ಕುಮಾರ್‌ನನ್ನು ಕೂಡ ಕರೆಸಿಕೊಂಡು ಕಾರಿನಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ರಮೇಶ್ ಕುಮಾರ್‌ಗೆ ಸೇರಿದ ಮರ್ಸಿಡಿಸ್ ಬೆನ್ಜ್ ಕಾರಿನಲ್ಲಿ (ಟಿ.ಎಸ್.೦೭ - ಎಫ್.ಎಸ್. - ೫೬೭೯) ನಲ್ಲಿ ಹೊರಟು ಉಪ್ಪರ್ - ಭುವನಗಿರಿ ನಡುವಿನ ಹೆದ್ದಾರಿ ಬಳಿ ಕಾರು ನಿಲ್ಲಿಸಿ ನಿಹಾರಿಕ ಹಾಗೂ ಅಂಕುರ್, ರಮೇಶ್‌ಕುಮಾರ್ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡುತ್ತಾರೆ. ಬಳಿಕ ಅದೇ ಕಾರಿನಲ್ಲಿ ಬೆಂಗಳೂರಿನ ಹೊರಮಾವು ಎಂಬಲ್ಲಿಗೆ ಶವದೊಂದಿಗೆ ಬಂದು ನಿಖಿಲ್ ಮೈ ರೆಡ್ಡಿಗೆ ವಿಷಯ ತಿಳಿಸುತ್ತಾರೆ.
ಶವವನ್ನು ಯಾರಿಗೂ ಸಿಗದಂತೆ ನಾಶಮಾಡಬೇಕು ಎಂಬ ಉದ್ದೇಶದಿಂದ ಪರಸ್ಪರ ಚರ್ಚಿಸುತ್ತಾರೆ. ಈ ವೇಳೆ ನಿಹಾರಿಕಾ ಹಾಗೂ ನಿಖಿಲ್‌ಗೆ ಕೊಡಗಿನ ಪರಿಚಯವಿದ್ದ ಕಾರಣ ಇಲ್ಲಿಗೆ ತಂದು ಶವವನ್ನು ನಾಶಮಾಡಲು ತೀರ್ಮಾನಿಸುತ್ತಾರೆ. ಅದರಂತೆ ಸುಂಟಿಕೊಪ್ಪ ಪನ್ಯ ಎಸ್ಟೇಟ್‌ನ ಸಂದೇಶ್ ಎಂಬವರ ಕಾಫಿ ತೋಟಕ್ಕೆ ಶವವನ್ನು ತಂದು ಸುಟ್ಟು ಹಾಕಿ ತೆರಳುತ್ತಾರೆ.
೪ ತಂಡಗಳ ರಚನೆ
ಈ ಪ್ರಕರಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ೧೬ ಮಂದಿಯ ಒಟ್ಟು ೪ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ತಾ. ೨೨ ರಂದು ನಿಹಾರಿಕಾ ಮತ್ತು ನಿಖಿಲ್‌ನನ್ನು ರಾಮಮೂರ್ತಿ ನಗರದಲ್ಲಿ, ಅಂಕುರ್‌ನನ್ನು ಹರಿದ್ವಾರದ ಹೊಟೇಲ್‌ವೊಂದರಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸ್‌ಪಿ ರಾಮರಾಜನ್, ಎಎಸ್‌ಪಿ ಸುಂದರ್‌ರಾಜ್, ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಕೆ. ರಾಜೇಶ್, ಸೋಮವಾರಪೇಟೆ ಪೊಲೀಸ್ ನಿರೀಕ್ಷಕ ಎಂ. ಮುದ್ದು ಮಾದೇವ, ಡಿಸಿಆರ್‌ಬಿ ನಿರೀಕ್ಷಕ ಐ.ಪಿ. ಮೇದಪ್ಪ, ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿಗಳಾದ ಪಿ. ಮೋಹನ್‌ರಾಜ್, ಕೆ.ಹೆಚ್. ಭಾರತಿ, ಸುಂಟಿಕೊಪ್ಪ ಎಎಸ್‌ಐಗಳಾದ ಎ.ಬಿ. ತೀರ್ಥಕುಮಾರ್, ಹೆಚ್.ಪಿ. ಸುರೇಶ್, ಕುಶಾಲನಗರ ಗ್ರಾಮಾಂತರ ಠಾಣೆಯ ಎಎಸ್‌ಐ ವಿ.ಜಿ. ವೆಂಕಟೇಶ್, ಶನಿವಾರಸಂತೆ ಠಾಣೆ ಮುಖ್ಯಪೇದೆ ಜಿ.ಆರ್. ಉದಯಕುಮಾರ್, ಸುಂಟಿಕೊಪ್ಪ ಠಾಣೆ ಮುಖ್ಯಪೇದೆ ಎಸ್.ಡಿ. ಆಶಾ, ಸೋಮವಾರಪೇಟೆ ಠಾಣೆ ಮುಖ್ಯಪೇದೆ ಸುದೀಶ್‌ಕುಮಾರ್, ಕುಶಾಲನಗರ ಸಂಚಾರಿ ಠಾಣೆ ಮುಖ್ಯಪೇದೆ ಎನ್.ಆರ್. ರಮೇಶ್, ಕುಶಾಲನಗರ ಪಟ್ಟಣ ಠಾಣೆ ಸಿಬ್ಬಂದಿ ಜಿ.ಆರ್. ರಂಜಿತ್, ಎಲ್. ಬಾಬು, ಕುಶಾಲನಗರ ವೃತ್ತ ಕಚೇರಿಯ ಮುಖ್ಯಪೇದೆ ಕೆ.ಎಸ್. ಮಹೇಂದ್ರ, ಸಿಬ್ಬಂದಿ ಎಸ್.ಎನ್. ಸಂದೇಶ್, ಸುಂಟಿಕೊಪ್ಪ ಠಾಣೆ ಸಿಬ್ಬಂದಿಗಳಾದ ಕೆ.ಆರ್. ಜಗದೀಶ್, ಎಸ್. ಪ್ರವೀಣ್, ಎಸ್.ಪಿ. ನಿಶಾಂತ್, ಸಿಡಿಆರ್ ವಿಭಾಗದ ಮುಖ್ಯಪೇದೆಗಳಾದ ಸಿ.ಕೆ. ರಾಜೇಶ್, ಬಿ.ಕೆ. ಪ್ರವೀಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.