ಗೋಣಿಕೊಪ್ಪಲು, ಅ. ೨೬: ಹೋಬಳಿ ಘಟಕಗಳು ಕನ್ನಡ ಸಾಹಿತ್ಯ ಪರಿಷತ್ತಿನ ಬೇರುಗಳಂತೆ. ಅವು ಗಟ್ಟಿಗೊಂಡರೆ ಪರಿಷತ್ತು ಸದೃಢಗೊಳ್ಳುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿದರು.
ಗಡಿಭಾಗ ಕುಟ್ಟ ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶ್ರೀಮಂಗಲ ಹೋಬಳಿಯ ನೂತನ ಕಾರ್ಯಕಾರಿ ಮಂಡಳಿಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಗಡಿಭಾಗದ ಕನ್ನಡೇತರರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಿದೆ. ಅಲ್ಲದೆ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮ ಗಳನ್ನು ಆಯೋಜಿಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಮಂಗಲ ಹೋಬಳಿಯ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಮಾತನಾಡಿ, ಮುಂದಿನ ತಿಂಗಳಿನಲ್ಲಿ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಎರಡು ದತ್ತಿ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವು ದೆಂದರು. ಹೋಬಳಿ ಕಾರ್ಯದರ್ಶಿ ಸುಮನ್ ಅಜ್ಜಮಾಡ, ಕೋಶಾಧಿಕಾರಿ ಎಸ್.ಎಂ. ರಾಜೇಂದ್ರ ಪ್ರಸಾದ್, ನಿರ್ದೇಶಕರುಗಳಾದ ಎ.ಪಿ. ಸಾವಿತ್ರಿ, ಪೆಲ್ವಿನ್ ಪೂಣಚ್ಚ, ಹೆಚ್.ಜಿ. ಪ್ರತಾಪ್, ಪಿ. ಮುರುಗನ್, ಜೆ.ಬಿ. ರಮೇಶ್ ನಾಗರಹೊಳೆ, ಸದಸ್ಯ ಉಳುವಂಗಡ ಉದಯ ಉಪಸ್ಥಿತರಿದ್ದರು.