ಮಡಿಕೇರಿ, ಅ. ೨೬ : ಪಿ ಆ್ಯಂಡ್ ಜಿ ಕ್ರಿಯೇಷನ್ಸ್ ಹಾಗೂ ಕೊಡಗು ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸಿರುವ "ಕಾಲತ್‌ರ ಕಳಿ" ಕೊಡವ ಚಲನಚಿತ್ರ ತಾ. ೨೮ ರಂದು ವೀರಾಜಪೇಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ಕೊಡವ ಸಮಾಜದಲ್ಲಿ ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ಪುರಸಭೆಯ ಅಧ್ಯಕ್ಷ ಮನೆಯಪಂಡ ದೇಚಮ್ಮ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ನಡಿಕೇರಿಯಂಡ ವಿಕ್ರಮ್ ಪಾಲ್ಗೊಳ್ಳಲಿದ್ದಾರೆ ಎಂದರು.

ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸೋಮೆಯಂಡ ಬೋಸ್ ಬೆಳ್ಯಪ್ಪ ಹಾಗೂ ಸಾರ್ವಜನಿಕರ ನೆರವಿನಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಮಾಚೆಟ್ಟಿರ ವಿಕಾಸ್ ಬೋಪಣ್ಣ, ಕೋಪುಡ ದೇಸ್ನ ದೇಚಮ್ಮ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ೧೦೦ಕ್ಕೂ ಹೆಚ್ಚು ಮಂದಿ ಅಭಿನಯಿಸಿದ್ದು, ಕೊಡಗಿನ ವಿವಿಧೆಡೆ ಚಿತ್ರೀಕರಿಸಲಾಗಿದೆ.

ಪಿ ಆ್ಯಂಡ್ ಜಿ ಕ್ರಿಯೇಷನ್ಸ್ ಈ ಮೊದಲು "ಭಾವ ಬಟ್ಟೆ", "ಉಷಾರ್" ಹಾಗೂ "ಕಲ್ಲಕೆರೆ ಮಾದೇವಿ" ಎನ್ನುವ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿತ್ತು ಎಂದು ಪ್ರತೀಶ್ ಪೂವಯ್ಯ ಹೇಳಿದರು.

ಮತ್ತೋರ್ವ ನಿರ್ದೇಶಕ ಆಚೆಯಡ ಗಗನ್ ಗಣಪತಿ ಮಾತನಾಡಿ, ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ಚಟುವಟಿಕೆ ಹಾಗೂ "ಹನಿ ಟ್ರಾö್ಯಪ್" ಗಳಂತಹ ಮಾರಕ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ "ಕಾಲತ್‌ರ ಕಳಿ"ಯಲ್ಲಿ ಯುವಕÀ, ಯುವತಿಯರಿಗೆ ಉತ್ತಮ ಸಂದೇಶವನ್ನು ನೀಡಿ ಸಾಮಾಜಿಕ ಜಾಗೃತಿ ಮೂಡಿಸಲಾಗಿದೆ ಎಂದರು.

ಕಲಾವಿದ ಚೇನಂಡ ಗಿರೀಶ್ ಪೂಣಚ್ಚ ಮಾತನಾಡಿ, "ಕಾಲತ್‌ರ ಕಳಿ" ಚಲನಚಿತ್ರ ತಾ. ೨೮ ಹಾಗೂ ೨೯ ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ಪ್ರತಿದಿನ ೩ ಪ್ರದರ್ಶನ ಕಾಣಲಿದೆ. ಬೆಳಿಗ್ಗೆ ೧೦.೩೦, ಮಧ್ಯಾಹ್ನ ೨ ಗಂಟೆ ಮತ್ತು ಸಂಜೆ ೬ ಗಂಟೆಗೆ ಪ್ರದರ್ಶನವಿರುತ್ತದೆ. ತಾ. ೩೧ ಹಾಗೂ ನ.೧ ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಮೂರು ಪ್ರದರ್ಶನ ನೀಡಲಾಗುವುದು. ಅಲ್ಲದೆ ಕೊಡಗಿನ ವಿವಿಧೆಡೆ ಚಿತ್ರ ಪ್ರದರ್ಶನ ಕಾಣಲಿದ್ದು, ಮೈಸೂರು, ಬೆಂಗಳೂರು ಕೊಡವ ಸಮಾಜದಲ್ಲೂ ಪ್ರದರ್ಶನವಿರುತ್ತದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕಲಾವಿದೆ ತಾತಂಡ ಪ್ರಭಾ ನಾಣಯ್ಯ, ಕಾರ್ಯಕಾರಿ ನಿರ್ಮಾಪಕ ಸೋಮೆಯಂಡ ಬೋಸ್ ಬೆಳ್ಯಪ್ಪ, ಕಲಾವಿದೆ ಕಾಣತಂಡ ಬೀನ ಜಗದೀಶ್ ಉಪಸ್ಥಿತರಿದ್ದರು.