ಗ್ರಾಮಸ್ಥರ ಆಕ್ರೋಶ

ಹೆಬ್ಬಾಲೆ, ಅ. ೨೭: ಗ್ರಾಮದ ಹಾಗೂ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕಾದ ತೊರೆನೂರು ಪಂಚಾಯಿತಿ ಗ್ರಾಮಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಭಿವೃದ್ಧಿ ಅಧಿಕಾರಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಟಿ.ಕೆ. ಪಾಂಡುರAಗ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೊರೆನೂರು ಗ್ರಾಮ ಪಂಚಾಯಿತಿ ವತಿಯಿಂದ ಅರಿಸಿನಗುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ ೨೦೨೪ನೇ ಸಾಲಿನ ಗ್ರಾಮಸಭೆಯಲ್ಲಿ ಕೆಲವು ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ನಂತರ ಗ್ರಾಮಸ್ಥರು ಅವರ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡದೆ ಸಭೆಯನ್ನು ಅಧಿಕಾರಿ ಶ್ಯಾಮ್ ತಮ್ಮಯ್ಯ ಅರ್ಧಕ್ಕೆ ಅಂತ್ಯ ಗೊಳಿಸಿದರು. ನಮ್ಮ ಸಮಸ್ಯೆಗಳನ್ನು ಆಲಿಸಿ ಎಂದು ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷö್ಯ ತೋರಿದ್ದರು ಎಂದು ಪಾಂಡುರAಗ ಅಸಮಾಧಾನ ವ್ಯಕ್ತಪಡಿಸಿದರು. ನೋಡೆಲ್ ಅಧಿಕಾರಿಗಳಾದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕಾಳನಾಯಕ ಕೂಡ ಸರ್ಕಾರದ ನಿಯಮದ ಪ್ರಕಾರ ಗ್ರಾಮಸಭೆ ನಡೆಸಬೇಕು ಎಂದು ಆಡಳಿತ ಮಂಡಳಿಗಾಗಲಿ ಅಥವಾ ಅಭಿವೃದ್ಧಿ ಅಧಿಕಾರಿಗಾಗಲಿ ಸೂಚನೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಮುಖ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ನಡುವೆಯೇ ಕಾಟಾಚಾರಕ್ಕಾಗಿ ಸಭೆಯನ್ನು ನಡೆಸಿ ಮುಕ್ತಾಯಗೊಳಿಸಿದರು ಎಂದು ದೂರಿದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಡಿ. ರವಿ ಮಾತನಾಡಿ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಈ ಯೋಜನೆ ವಿಫಲವಾಗಿರುವ ಬಗ್ಗೆ ಸಭೆಯಲ್ಲಿ ಸಮರ್ಪಕ ಉತ್ತರ ನೀಡುವಲ್ಲಿ ಅಧಿಕಾರಿಗಳು ವಿಫಲ ರಾದರು. ಈಗಾಗಲೇ ಜಲಜೀವನ್ ಮಿಷನ್ ಗುತ್ತಿಗೆದಾರರಿಗೆ ರೂಪಾಯಿ ಹತ್ತು ಲಕ್ಷವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಗುತ್ತಿಗೆದಾರ ಅರ್ಧಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪ್ರಚಾರ ಮಾಡದೆ ವಾರ್ಡ್ ಸಭೆಯನ್ನು ನಡೆಸಿದರು ಎಂದು ದೂರಿದರು.

ವಿ.ಎಸ್.ಎಸ್.ಎನ್. ನಿರ್ದೇಶಕ ಹೆಚ್.ಸಿ. ಮೂರ್ತಿ ಮಾತನಾಡಿ, ಗ್ರಾಮಸಭೆಯನ್ನು ಪರಿಪೂರ್ಣವಾಗಿ ನಡೆಸುವಲ್ಲಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸಭೆಯನ್ನು ಕಾಟಾಚಾರಕ್ಕಾಗಿ ನಡೆಸಿ ಮುಕ್ತಾಯಗೊಳಿಸಿದರು. ಆದರೆ ಜನರಿಗೆ ಸಭೆಯಿಂದ ಯಾವುದೇ ಪ್ರಯೋಜನ ಆಗಿಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿ ಪಿಡಿಓ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಟಿ.ಬಿ. ಜಗದೀಶ್, ಭೂ ನ್ಯಾಯ ಮಂಡಳಿ ಸದಸ್ಯ ಸಂಜೀವಯ್ಯ, ವಿ.ಎಸ್.ಎಸ್.ಎನ್. ನಿರ್ದೇಶಕ ಹೆಚ್.ಸಿ. ಮೂರ್ತಿ, ಎ.ಎಲ್. ಮೂರ್ತಿ ಇದ್ದರು.