x

ಕುಶಾಲನಗರ, ಅ. ೨೮ : ಶತಮಾನೋತ್ಸವ ಕಂಡ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಿಲ್ಲೆ ಸೇರಿದಂತೆ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಕಂಡ ತಾಲೂಕು ಮಟ್ಟದ ಏಕೈಕ ಸಹಕಾರ ಸಂಘ ಎಂದರೆ ತಪ್ಪಾಗಲಾರದು.

ಅತಿ ಪುಟ್ಟ ಜಿಲ್ಲೆ ಕೊಡಗಿನ ಹೆಬ್ಬಾಗಿಲಾದ ಕುಶಾಲನಗರದಲ್ಲಿ ಪಟ್ಟಣದ ವ್ಯಾಪಾರಸ್ಥರು ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಾಂತರ ಭಾಗದ ರೈತರು ಹಣಕಾಸಿನ ವಹಿವಾಟುಗಳನ್ನು ನಡೆಸಲು ಅಂದಿನ ಕಾಲದ ಕೆಲವು ಮುತ್ಸದ್ಧಿಗಳು ಸೇರಿ ಚಿಂತನೆ ನಡೆಸಿ ಸಮಾಜದ ಒಳಿತಿಗಾಗಿ ಪ್ರಾರಂಭಿಸಿದ ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದೀಗ ಟಿ.ಆರ್. ಶರವಣ ಕುಮಾರ್ ತಂಡದ ಮೂಲಕ ಸಾಧನೆಯ ಮೆಟ್ಟಿಲೇರಿದೆ.

೨೦೧೯ರ ಫೆಬ್ರವರಿ ತಿಂಗಳಲ್ಲಿ ಕುಶಾಲನಗರದ ಮಾರುಕಟ್ಟೆ ರಸ್ತೆಯಲ್ಲಿ ಸುಸಜ್ಜಿತವಾದ ಯಾವುದೇ ಕಾರ್ಪೊರೇಟ್ ಸಂಸ್ಥೆಗಳಿಗೆ ಕಡಿಮೆ ಇಲ್ಲದ ಒಂದು ಕಚೇರಿ ನಿರ್ಮಾಣ ಈ ಸಂಘದ ಸಾಧನೆಯ ಪ್ರಥಮ ಮೆಟ್ಟಿಲಾಗಿ ಖ್ಯಾತಿ ಹೊಂದಿದೆ.

ಶತಮಾನೋತ್ಸವ ಪೂರೈಸಿ ಸತತ ೭ ವರ್ಷಗಳಿಂದ ಕೋಟಿಗೂ ಮೇಲೆ ಲಾಭಗಳಿಸುತ್ತಿರುವ ಕೊಡಗಿನ ಹೆಬ್ಬಾಗಿಲಿನ ಕುಶಾಲನಗರದ ೧೨೨ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಶತಮಾನೋತ್ಸವ ನೆನಪಿನಲ್ಲಿ ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ಇದೀಗ ಅತ್ಯಾಧುನಿಕ ತಂತ್ರಜ್ಞಾನ, ಸರ್ವ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶತಮಾನೋತ್ಸವ ಸಂಕೀರ್ಣ ನಿರ್ಮಾಣ ಕಾರ್ಯ ಕೈಗೊಂಡಿದೆ.

ಸಂಘ ಗುಡ್ಡೆಹೊಸೂರು, ಸಿದ್ದಾಪುರ ರಸ್ತೆಯಲ್ಲಿ ಖರೀದಿಸಿರುವ ೧ ಎಕರೆ ೭೯ ಸೆಂಟ್ ನಿವೇಶನದಲ್ಲಿ ಅಂದಾಜು ರೂ. ೧೬.೫ ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಮುಚ್ಚಯ ಕಟ್ಟಡ ನಿರ್ಮಾಣ ಕೈಗೊಂಡಿದೆ. ಈ ಸುಸಜ್ಜಿತ ಕಟ್ಟಡದಲ್ಲಿ ಏಕಕಾಲದಲ್ಲಿ ೧೪೦೦ ರಷ್ಟು ಸಭಿಕರು ಕುಳಿತುಕೊಳ್ಳಬಹುದು.

ಜೊತೆಗೆ ಪೂರಕವಾಗಿ ೬೦೦ ಜನ ಕುಳಿತು ಊಟ ಮಾಡಬಹುದಾದ ವಿಶಾಲವಾದ ಊಟದ ಕೊಠಡಿ, ಮಾಂಸಾಹಾರ ಅಡುಗೆ ತಯಾರು ಮಾಡಲು ಪ್ರತ್ಯೇಕ ಅಡುಗೆಮನೆ, ಪಾತ್ರೆಗಳು ಇತ್ಯಾದಿ ಹಾಗೂ ಸಸ್ಯಾಹಾರಿ ಅಡುಗೆ ತಯಾರಿಸಲು ಕೂಡ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

ವಾಣಿಜ್ಯ ನಿವೇಶನದ ರಸ್ತೆಯ ಬದಿಯ ಸ್ಥಳದಲ್ಲಿ ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ ಹಾಗೂ ಸಂಘದ ಕಚೇರಿಯ ಶಾಖೆಯನ್ನು ಕೂಡ ಪ್ರಾರಂಭಿಸಲು ಚಿಂತನೆ ಹರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಇದರೊಂದಿಗೆ ಸಂಘದ ಸದಸ್ಯರ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರ ನೆಲ ಅಂತಸ್ತಿನಲ್ಲಿ, ಕಟ್ಟಡದ ಮೇಲೆ ೧೦ ಸುಸಜ್ಜಿತ ಕೊಠಡಿಗಳನ್ನು ಒಳಗೊಂಡ ವಸತಿ ಗೃಹಗಳನ್ನು ನಿರ್ಮಾಣ ಮಾಡುವ ಚಿಂತನೆಯೊAದಿಗೆ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಲ್ಯಾಣ ಭವನವನ್ನು ಸಂಘದ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ನೀಡಲು ಕೂಡ ಅವಕಾಶ ವಿದೆ. ವಾಣಿಜ್ಯ ಸಂಕೀರ್ಣದ ಎರಡು ಕಟ್ಟಡದ ನಡುವೆ ಒಂದು ಆ್ಯಂಫಿ ಥಿಯೇಟರ್ ಹಾಗೂ ಸುಂದರ ಉದ್ಯಾನವನವನ್ನು ನಿರ್ಮಾಣ ಮಾಡುವ ಕ್ರಿಯಾಯೋಜನೆ ಇದಾಗಿದೆ.

ಇವೆಲ್ಲದರ ನಡುವೆ ಕಟ್ಟಡದ ಸುತ್ತಲೂ ಮುಂಭಾಗ ಹಾಗೂ ದಕ್ಷಿಣ ಭಾಗದಲ್ಲಿ ನೂರಕ್ಕಿಂತಲೂ ಅಧಿಕ ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡ ಲಾಗುವುದು.

(ಮೊದಲ ಪುಟದಿಂದ) ಈಗಾಗಲೇ ಕುಶಾಲನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಸಹಕಾರ ಸಂಘದಲ್ಲಿ ಇತಿಹಾಸವನ್ನು ನಿರ್ಮಿಸಿದೆ. ವಾಣಿಜ್ಯ ಸಮುಚ್ಚಯ ಭವನ ನಿರ್ಮಾಣ ಪೂರ್ಣಗೊಂಡಲ್ಲಿ ಇದೊಂದು ಜಿಲ್ಲೆಯ ಸಹಕಾರ ಸಂಘದಲ್ಲಿ ದಾಖಲೆಯ ಸಾಧನೆ ಎಂಬAತೆ ಬಿಂಬಿತವಾಗಲಿದೆ ಎಂದು ಶರವಣ ಕುಮಾರ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

೧೯೨೧ರಲ್ಲಿ ಪ್ರೇಸರ್ ಪೇಟೆಯಲ್ಲಿ ಪ್ರಾರಂಭಗೊAಡ ಸಂಘ ಪ್ರಸಕ್ತ ೩೬೦೦ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡ ಸಂಘ ಇತ್ತೀಚಿನ ಸಾಲಿನಲ್ಲಿ ೧ ಕೋಟಿ ೨೫ ಲಕ್ಷ ರೂ. ಗಳ ಲಾಭಗಳಿಸಿದೆ ಎಂದು ಶರವಣ ಕುಮಾರ್ ಮಾಹಿತಿ ನೀಡಿದ್ದಾರೆ.

ಅತ್ಯಾಧುನಿಕ ಕಟ್ಟಡಗಳ ನಿರ್ಮಾಣದ ನಡುವೆ ಪ್ರಸಕ್ತ ಸಾಲಿನಲ್ಲಿ ಸಂಘವು ೨೬೬.೪೪ ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ನಡೆಸುತ್ತಿದೆ. ಸದಸ್ಯರಿಗೆ ೨೫ ರೀತಿಯ ವಿವಿಧ ಸಾಲಗಳನ್ನು ಅತಿ ಶೀಘ್ರದಲ್ಲಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಮಹಿಳಾ ಸದಸ್ಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಗುಂಪು ಸಾಲಯೋಜನೆ ಕೂಡ ಯಶಸ್ವಿಯಾಗಿದೆ ಎಂದು ಶರವಣ ಅವರು ಮಾಹಿತಿ ನೀಡಿದರು.

ಸಂಘದ ಸದಸ್ಯರುಗಳಿಗೆ ವಿತರಿಸುವ ಸಾಲಗಳ ಮಿತಿಯನ್ನು ಕೂಡ ಹೆಚ್ಚಿಸಲಾಗಿದ್ದು ಜಾಮೀನು ಸಾಲ ೪ ಲಕ್ಷ ರೂ.ಗಳು ಮಧ್ಯಮಾವಧಿ, ಗಿರವಿ ಸಾಲ, ಮನೆ ರಿಪೇರಿ, ಮನೆ ಕಟ್ಟಲು ೧೫ ರಿಂದ ೨೦ ಲಕ್ಷ. ನಿವೇಶನ ಕಟ್ಟಡ, ವಾಣಿಜ್ಯ ಮಳಿಗೆ, ವಾಸದ ಮನೆ ಖರೀದಿ ಮಾಡಲು ೫೦ ಲಕ್ಷ, ವ್ಯಾಪಾರ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲು, ವ್ಯಾಪಾರ ಅಭಿವೃದ್ಧಿ ದೀರ್ಘಾವಧಿ ಸಾಲ ೫೦ ಲಕ್ಷ, ಹೊಸ ವಾಹನ ಖರೀದಿಗೆ ೨೫ ಲಕ್ಷ, ದೊಡ್ಡ ಮಟ್ಟದ ವ್ಯಾಪಾರಸ್ಥರಿಗೆ ವ್ಯಾಪಾರ ಸಾಲ ೩೦ ಲಕ್ಷ ಈ ರೀತಿ ಹಲವು ಸಾಲಗಳನ್ನು ನೀಡುವ ಮೂಲಕ ಸದಸ್ಯರ ಏಳಿಗೆಯಲ್ಲಿ ಸಂಘ ಪ್ರಮುಖ ಪಾತ್ರ ವಹಿಸಿದೆ ಎಂದು ಶರವಣ ಮಾಹಿತಿ ನೀಡಿದರು.

ಸಹಕಾರಿ ಸಂಘ ಕ್ಷೇತ್ರದಲ್ಲಿ ವಿಭಿನ್ನ ರೀತಿಯ ಅಭಿವೃದ್ಧಿಯ ನಡುವೆ ಕುಶಾಲನಗರ ಸಹಕಾರ ಸಂಘ ಹಲವು ಸಾಧನೆಗಳ ಗುರಿಯನ್ನು ತಲುಪಿರುವುದು ನಿಜಕ್ಕೂ ಮೆಚ್ಚುಗೆಯ ಅಂಶವಾಗಿದೆ.

ವರದಿ -ಚಂದ್ರಮೋಹನ್