ಕೂಡಿಗೆ, ಅ. ೨೭: ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತ ಮೊದಲಾದ ಪರಿಸರ ಜಾಗೃತಿ ಸಂದೇಶಗಳು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮೊಳಗಿದವು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ, ಮಡಿಕೇರಿ, ಶಾಲಾ ಶಿಕ್ಷಣ ಇಲಾಖೆ, ರಾಷ್ಟಿçÃಯ ಹಸಿರು ಪಡೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ವತಿಯಿಂದ ಶಾಲೆಯ ಇಕೋ ಕ್ಲಬ್ ಮತ್ತು ಎನ್.ಎಸ್. ಎಸ್., ಎಸ್.ಡಿ.ಎಂ.ಸಿ., ಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ‘‘ನಮ್ಮ ನಡೆ ಹಸಿರೆಡೆಗೆ’’ ‘ಗೋ ಗ್ರೀನ್ ಅಭಿಯಾನ'ದಡಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಏರ್ಪಡಿಸಿದ್ದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ದೀಪಾವಳಿ ಕುರಿತು ಜನಜಾಗೃತಿ ಮೂಡಿಸಿದರು.
ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದ ಶಾಲೆಯ ಮುಖ್ಯ ಶಿಕ್ಷಕರೂ ಆದ ರಾಷ್ಟಿçÃಯ ಹಸಿರು ಪಡೆ ಇಕೋ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮ್ ಕುಮಾರ್, ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಪರಿಸರ ವ್ಯವಸ್ಥೆಯ ಮೇಲೆ ಉಂಟಾಗುವ ದುಷ್ಪರಿ ಣಾಮಗಳು ಹಾಗೂ ಅನಾಹುತಗಳ ಬಗ್ಗೆ ವಿವರಿಸಿದರು. ಪಟಾಕಿ ಸಿಡಿಸುವುದರಿಂದ ಉಂಟಾಗುವ ಶಬ್ದ, ವಾಯು ಮತ್ತು ಜಲ ಮಾಲಿನ್ಯ ಹಾಗೂ ನೆಲ ಮಾಲಿನ್ಯದ ಜೊತೆಗೆ ಪ್ರಾಣಿ - ಪಕ್ಷಿ ಜೀವ ಸಂಕುಲಗಳು ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಪರಿಸರ ವ್ಯವಸ್ಥೆಗೂ ತೀವ್ರ ಧಕ್ಕೆಯುಂಟಾಗುತ್ತದೆ. ಈ ದಿಸೆಯಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಬೇಕಿದೆ ಎಂದರು.
ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಹಸಿರು ಪಟಾಕಿ ಬಳಕೆ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯಾ, ದೀಪಾವಳಿ ಹಬ್ಬದ ಸಂದರ್ಭ ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಹಣತೆ ಬೆಳಗಿಸಬೇಕು ಎಂದರು.
ಶಾಲಾ ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಎಂ.ಟಿ. ದಯಾನಂದ ಪ್ರಕಾಶ್, ಬಿ.ಎನ್. ಸುಜಾತಾ, ಎಸ್.ಎಂ. ಗೀತಾ, ಅನ್ಸಿಲಾ ರೇಖಾ, ಸಿಬ್ಬಂದಿ ಎಂ. ಉಷಾ ಇದ್ದರು.
ಹಸಿರು ದೀಪಾವಳಿ ಜಾಗೃತಿ ಅಭಿಯಾನ ವಿದ್ಯಾರ್ಥಿಗಳು ಅಲಂಕಾರಿಕ ಹಾಗೂ ಪುಷ್ಪಗಳಿಂದ ರಂಗೋಲಿ ಬಿಡಿಸಿ ಗಮನ ಸೆಳೆದರು. ಹಸಿರು ದೀಪಾವಳಿ ಆಚರಣೆ ಕುರಿತು ವಿದ್ಯಾರ್ಥಿಗಳು ಹಾಡಿದರು.
ಗ್ರಾಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಣತೆ ಹಚ್ಚೋಣ, ಹಸಿರು ದೀಪಾವಳಿ ಆಚರಿಸೋಣ, ಮಾಲಿನ್ಯ ಪಟಾಕಿ ತ್ಯಜಿಸೋಣ ಮಾಲಿನ್ಯ ತಡೆಯೋಣ, ಮಾಲಿನ್ಯ ಮುಕ್ತ ದೀಪಾವಳಿ ಆಚರಿಸೋಣ ಬನ್ನಿ, ಪರಿಸರ ಸಂರಕ್ಷಿಸೋಣ ಬನ್ನಿ, ಎಂಬಿತ್ಯಾದಿ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದು ಜನರಲ್ಲಿ ಹಸಿರು ದೀಪಾವಳಿ ಆಚರಿಸುವಂತೆ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿದರು.