ಕುಶಾಲನಗರ, ಅ. ೨೮: ಕವಿತೆಗಳಿಗೆ ಸ್ಪಂದಿಸುವ ಪ್ರತಿಯೊಬ್ಬರಲ್ಲೂ ಒಬ್ಬ ಕವಿ ಇರುತ್ತಾನೆ ಎಂದು ನಾಡಿನ ಹೆಸರಾಂತ ಸಾಹಿತಿ ಬಿ.ಆರ್. ಲಕ್ಷö್ಮಣ್‌ರಾವ್ ಅಭಿಪ್ರಾಯಿಸಿದರು

ಕೊಡಗಿನ ಹಿರಿಯ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರು ರಚಿಸಿದ ಚುಟುಕುಗಳ ಸಂಕಲನ ‘ಹನಿ’ಯನ್ನು ಗುಮ್ಮನಕೊಲ್ಲಿಯಲ್ಲಿನ ಲೇಖಕರ ಮನೆಯಲ್ಲಿ ಅನಾವರಣಗೊಳಿಸಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ಇನ್ನಿಲ್ಲವೆಂದಾದರೆ, ಕವಿಮನಸೊಂದು ಇಲ್ಲವಾಯಿತೆಂದೇ ಅರ್ಥ. ಯಾವುದೇ ಕಾವ್ಯ, ಕವನ ಗಳನ್ನು ಕೇಳಿ ಸಂತೋಷಿಸುವವರಲ್ಲಿ ಕವಿ ಮನಸು ಇದ್ದೇ ಇರುತ್ತದೆ.

ಚುಟುಕು ಇಲ್ಲವೆ ಹನಿಗವನ ವೆಂಬುದು ಹುರಿ ಗಾಳು ಇದ್ದಂತೆ. ಆಗೊಮ್ಮೆ ಈಗೊಮ್ಮೆ ಮೆಲ್ಲಲ್ಲಷ್ಟೆ ಇರುವ ಹುರಿಗಾಳನ್ನು ಊಟದಂತೆ ಮಾಡಲಾಗದು. ಅದೇ ರೀತಿ ಹನಿಗವನಗಳನ್ನು ರಚಿಸುವವರು ‘ಇಡಿಗವಿತೆ’ಗಳ ರಚನೆಗೆ ಮನಮಾಡಬೇಕು.

ಸಮಾಧಾನವಿಲ್ಲದ ಧಾವಂತದ ಬದುಕು ಇಂದು ಎಲ್ಲರದ್ದಾಗಿದೆ. ಇದೇ ರೀತಿ ಕವಿತೆಗಳು ಧಾವಂತದ ಹಾದಿಯಲ್ಲಿವೆ. ಇದರಿಂದ ಗುಣಮಟ್ಟ ಕ್ಕಿಂತ ಮಿಗಿಲಾಗಿ ‘ಜೊಳ್ಳು’ಹೆಚ್ಚಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭ ‘ನಿಂಬೆ ಗಿಡ ತುಂಬಾ ಚೆಂದ’ ಹಾಡನ್ನು ಹಾಡುವ ಮೂಲಕ ಸಾಹಿತ್ಯ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ವಿಶೇಷ ಆಹ್ವಾನಿತರಾದ ಕೊಡಗು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಚುಟುಕು ಕವನಗಳ ರಚನೆಯಲ್ಲಿ ವಸ್ತು ವಿಷಯ ಕವಿಯದ್ದಾದರು, ಆಯ್ಕೆಯ ವಸ್ತು ವಿಷಯ ಸಾರ್ವತ್ರಿಕವಾಗಿರುತ್ತದೆ. ಹಾಯ್ಕು, ವಚನ ಪ್ರಕಾರಗಳ ಸಾಲಿನಲ್ಲೆ ಚುಟುಕು ಸಹ ಬರುತ್ತದೆ. ಇಂತಹ ಕವನ ಪ್ರಕಾರದಲ್ಲಿ ತೊಡಗಿಸಿಕೊಂಡು ಚುಟುಕು ಸಂಕಲನವನ್ನು ಹೊರ ತಂದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದ ಹಾ.ತಿ. ಜಯಪ್ರಕಾಶ್ ಅವರು ಚುಟುಕು ಸಾಹಿತ್ಯ ಪ್ರಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡವ ಬಗ್ಗೆ ಶ್ಲಾಘಿಸಿ, ಪ್ರತಿಯೊಬ್ಬರು ದುಡ್ಡು ಕೊಟ್ಟು ಪುಸ್ತಕಗಳನ್ನು ಕೊಂಡು ಓದುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರೂ ಲಕ್ಷö್ಮಣ್‌ರಾವ್ ರಚನೆಯ ‘ಜಾಲಿ ಬಾರಿನಲ್ಲಿ..’ ಹಾಡನ್ನು ಅನಂತಶಯನ ಹಾಡಿದರು.

‘ಹನಿ’ ಚುಟುಕು ಕೃತಿಗೆ ಮುನ್ನುಡಿ ಬರೆದ ತ್ರಿಭಾಷಾ ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಚುಟುಕು ಕವನಗಳು ಎಂದರೆ ‘ಸ್ಟಿಲ್ ಫೋಟೋಗ್ರಾಫಿ’ಯಂತೆ. ಆಯಾ ಕ್ಷಣದ ಭಾವವನ್ನು ಕೆಲವೇ ಕೆಲವು ಸಾಲುಗಳಲ್ಲಿ ಚುಟುಕುಗಳು ಕಟ್ಟಿಕೊಡುತ್ತಸವೆ ಎಂದರಲ್ಲದೆ ಹನಿ ಸಂಕಲನದ ಚುಟುಕುಗಳ ಸ್ವಾರಸ್ಯ ಗಳನ್ನು ಸಭಿಕರ ಮುಂದೆ ತೆರೆದಿಟ್ಟರು.

ಹಾಸನ ನ್ಯಾಯಾಲಯದ ಸಿಬ್ಬಂದಿ ಹಾಗೂ ಗಾಯಕಿಯೂ ಆದ ಫಣಿವೇಣಿ ಬಿ.ಆರ್. ಲಕ್ಷö್ಮಣ್ ರಾವ್ ಅವರ ಕವನಗಳನ್ನು ಹಾಡುವ ಮೂಲಕ ಸಮಾರಂಭಕ್ಕೆ ಮೆರುಗು ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚುಟುಕು ಕವಿ ಹಾ.ತಿ. ಜಯಪ್ರಕಾಶ್, ತಾವು ಉದ್ಯೋಗಿಯಾಗಿ ೩೫ ವರ್ಷ ಸೇವೆ ಸಲ್ಲಿಸಿದ ಹಂತದಲ್ಲಿ ರಚಿಸಿದ ಚುರುಕು ಮುಟ್ಟಿಸುವ ಕವನಗಳ ಕಾರಣದಿಂದ ತಮಗೆ ೧೫ ಬಾರಿ ವರ್ಗಾವಣೆಯಾದುದನ್ನು ಸ್ವಾರಸ್ಯಕರವಾಗಿ ತಿಳಿಸಿ, ವಾರ್ತಾ ಕಮ್ಯೂನಿಕೇಷನ್‌ನ ಅನಿಲ್ ಎಚ್.ಟಿ. ಸಹಕಾರದಿಂದ ತಮ್ಮ ಚುಟುಕು ಸಂಕಲನ ಹೊರ ಬಂದಿದೆ ಎಂದರು.

ಕವಿ ಹಾ.ತಿ.ಜಯಪ್ರಕಾಶ್, ಪತ್ನಿ ಜಯಲಕ್ಷಿö್ಮ ಹಾಗೂ ಅತಿಥಿಗಳು ಖ್ಯಾತ ಸಾಹಿತಿ ಬಿ.ಆರ್. ಲಕ್ಷö್ಮಣ್ ರಾವ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ಇವರೊಂದಿಗೆ ಟಿ.ಪಿ.ರಮೇಶ್, ಬಿ.ಜಿ. ಅನಂತಶಯನ, ಚುಟುಕು ಸಂಕಲನವನ್ನು ಹೊರ ತಂಡದ ವಾರ್ತಾ ಕಮ್ಯೂನಿಕೇಷನ್ ಮುಖ್ಯಸ್ಥ ಅನಿಲ್ ಎಚ್.ಟಿ, ನಾಗೇಶ್ ಕಾಲೂರು, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಗಾಯಕಿ ಫಣಿವೇಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಮಾರಿ ಅಭಿಜ್ಞಾ ಪ್ರಾರ್ಥಿಸಿ, ಅನಿಲ್ ಎಚ್.ಟಿ. ಸ್ವಾಗತಿಸಿದರು. ಎಸ್.ಐ.ಮುನೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.