ಗೋಣಿಕೊಪ್ಪಲು, ಅ. ೨೮: ಕರ್ನಾಟಕ ರಾಜ್ಯದ ಸಹಕಾರ ಸಂಘಗಳಲ್ಲಿ ಕೊಡಗು ಸಹಕಾರ ಕ್ಷೇತ್ರವು ಅಗ್ರಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ರೈತರಿಗೆ ಸಹಕಾರಿಯಾಗಿ ಸಹಕಾರ ಸಂಘಗಳು ತಮ್ಮ ಸೇವೆ ನೀಡುತ್ತಿವೆ ಎಂದರು.

ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಕುಟ್ಟ ಸಮೀಪದ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಅರಂಭಗೊಳ್ಳಲಿರುವ ಕೆ. ಬಾಡಗ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಂಘದಲ್ಲಿ ಹಣಕಾಸಿನ ದುರುಪಯೋಗ ಇಲ್ಲದೆ ನಡೆಸಿದರೆ, ಗ್ರಾಮೀಣ ಭಾಗದ ಜನರಿಗೆ ಬಹಳ ವೇಗವಾಗಿ ಸಹಾಯ ನೀಡಬಹುದಾದ ಸಂಸ್ಥೆ ಸಹಕಾರಿ ಸಂಸ್ಥೆಯಾಗಿದೆ. ಕೊಡಗಿನ ಸಹಕಾರ ಸಂಘಗಳಲ್ಲಿ ದುರುಪಯೋಗ ವರದಿಗಳು ಅಷ್ಟಾಗಿ ಕೇಳಿ ಬರುತ್ತಿಲ್ಲ.

ಪ್ರಜ್ಞಾವಂತ ನಾಗರಿಕರು ಸಂಘವನ್ನು ಮುನ್ನಡೆಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಜನತೆಯ ಏಳಿಗೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ವಿಶೇಷವಾಗಿ ಕೃಷಿಯನ್ನೇ ಅವಲಂಬಿತವಾಗಿರುವ ನಮ್ಮ ಈ ಭಾಗದ ರೈತರಿಗೆ ಸಹಕಾರಿ ಸಂಘಗಳು ಅತ್ಯುತ್ತಮ ಸೇವೆಯನ್ನು ಒದಗಿಸಿ ಕೃಷಿಕರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಬೇಕೆಂದು ಈ ಸಂದರ್ಭ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು - ಮೈಸೂರು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ವಿಕಸಿತ ಭಾರತದಲ್ಲಿ ಕೊಡಗು ಆದರ್ಶ ಕ್ಷೇತ್ರವಾಗಲಿ, ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನ ನೀಡುತ್ತಿದೆ.

ಸಮೃದ್ದ ಭಾರತದಲ್ಲಿ ರೈತರಿಗೆ, ಗ್ರಾಮೀಣ ಭಾಗದ ಜನತೆಗೆ ಸಹಕಾರ ಆಗಬೇಕು ಎನ್ನುವ ಗುರಿ ಕೇಂದ್ರ ಸರ್ಕಾರ ಹೊಂದಿದೆ. ಆ ನಿಟ್ಟಿನಲ್ಲಿ ದೊಡ್ಡ ಪ್ರೋತ್ಸಾಹ ನೀಡುತ್ತಿದೆ ಎಂದರು.

ಕೇಂದ್ರ ಸರ್ಕಾರದ ಸೇತುವೆಯಾಗಿ ಕೆಲಸ ನಿರ್ವಹಿಸುವೆ, ಮೊದಲ ಬಾರಿಗೆ ಕೊಡಗಿನಲ್ಲಿ ಭೂಮಿಪೂಜೆ ನೆರವೇರಿಸಿರುವೆ. ಸರ್ಕಾರದ ಅನುದಾನ ಕೂಡ ಮೊದಲಿಗೆ ಕೆ. ಬಾಡಗಕ್ಕೆ ನೀಡಲಿದ್ದೇನೆ ಎಂದು ಭರವಸೆ ನೀಡಿದರು.

ಕೆ. ಬಾಡಗ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಾಚಿಮಾಡ ಎಂ. ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ನಿರ್ಮಾಣಕ್ಕೆ ಈಗಾಗಲೇ ೫೦ ಸೆಂಟ್ ಜಾಗವನ್ನು ಖರೀದಿಸಲಾಗಿದೆ. ೩೫೦ ಅಧಿಕ ಸದಸ್ಯರು ಸಂಘದಲ್ಲಿದ್ದಾರೆ. ೪ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಗ್ರಾಮದ ದಾನಿಗಳು ಹೆಚ್ಚಿನ ಸಹಕಾರ ನೀಡಿದ್ದಾರೆ. ಕೊಡಗು ಡಿಸಿಸಿ ಬ್ಯಾಂಕ್ ಉತ್ತಮ ಸಹಕಾರ ನೀಡಿದೆ ಈಗಾಗಲೇ ೨ ಕೋಟಿ ಸಾಲವನ್ನು ಸದಸ್ಯರು ಪಡೆದುಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಹಕಾರ ಸಂಘ ತೆರೆಯಬೇಕು ಎನ್ನುವುದು ಸರ್ಕಾರದ ನಿಯಮವಾಗಿದೆ.

ಆ ನಿಟ್ಟಿನಲ್ಲಿ ಸಂಘವನ್ನು ಆರಂಭಿಸಲಾಗಿದೆ. ಸಂಘದ ಸದಸ್ಯರು ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿದರೆ ಮಾತ್ರ ಸಂಘದ ಬೆಳವಣಿಗೆ ಸಾಧ್ಯ, ಆ ನಿಟ್ಟಿನಲ್ಲಿ ಸದಸ್ಯರು ಹೆಚ್ಚಿನ ಶ್ರಮ ವಹಿಸಬೇಕು.

ಡಿಸಿಸಿ ಬ್ಯಾಂಕ್ ವತಿಯಿಂದ ಸಿಗುವ ಸಹಕಾರವನ್ನು ತಮಗೆ ನೀಡಲಾಗುತ್ತದೆ.

ಕಟ್ಟಡ ನಿರ್ಮಾಣಕ್ಕೂ ಸಾಲವನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸಹಕಾರ ಉಪ ನಿಬಂಧಕ ವಿಜಯ್ ಕುಮಾರ್, ಸಹಾಯಕ ನಿಬಂಧಕಿ ಶೈಲಜಾ, ಕೆ. ಬಾಡಗ ಗ್ರಾ. ಪಂ. ಅಧ್ಯಕ್ಷ ಮುಕ್ಕಾಟಿರ ರಿತೇಶ್ ಬಿ. ಬಿದ್ದಪ್ಪ, ಇಡಿಸಿ ಅಧ್ಯಕ್ಷ ಮಾಚಿಮಾಡ ಸಿ. ನಾಣಯ್ಯ, ಕುಟ್ಟ ಪ್ಯಾಕ್ಸ್ ಅಧ್ಯಕ್ಷ ಮಚ್ಚಮಾಡ ಬಿ. ಸುಬ್ರಮಣಿ, ಯೋಜನಾ ಅಧಿಕಾರಿ ಮೇಕೇರಿರ ಎಸ್. ಮೋಹನ್ ಸೇರಿದಂತೆ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ನಿರ್ದೇಶಕ ಪೆಮ್ಮಣಮಾಡ ರಮೇಶ್ ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬೊಳ್ಳೆರ ಜಿ. ಸುಬ್ಬಯ್ಯ, ನಿರ್ದೇಶಕರುಗಳಾದ ಅಳಮೇಂಗಡ ಮೋಟಯ್ಯ, ಪೆಮ್ಮಣಮಾಡ ರಮೇಶ್, ಬೊಳ್ಳೆರ ಕೆ. ಅಪ್ಪಯ್ಯ, ದೇಯಂಡ ಜಯರಾಂ, ಕೆ.ಎಸ್. ಲೀಲಾವತಿ, ಸಿ.ಜೆ. ನರೇಂದ್ರ, ಎ.ಡಿ. ಸಂಧ್ಯಾ, ಮೇಘನ ಚಂದ್ರಶೇಖರ್, ಗುಡಿಯಂಗಡ ಮೀನಾಕ್ಷಿ, ಕಳ್ಳಿಚಂಡ ಪಿ. ಪ್ರಭಕುಮಾರಿ, ಇಡಿಸಿ ಕಳ್ಳಿಚಂಡ ರತ್ನ ಪೂವಯ್ಯ, ಸಿಇಓ ನಾರಾಯಣ, ಸಂಘದ ಸಿಬ್ಬಂದಿಗಳು ಊರಿನ ಗಣ್ಯರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.