ಸಿದ್ದಾಪುರ, ಅ. ೨೭ : ಕಳೆದ ಹಲವಾರು ವರ್ಷಗಳಿಂದ ರಸ್ತೆ ಸಮಸ್ಯೆ ಪರಿಹಾರ ಕಾಣದ ಹಿನ್ನೆಲೆ ಗ್ರಾಮಸ್ಥರೇ ರಸ್ತೆ ದುರಸ್ತಿಗೆ ಮುಂದಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೇಕರೆ ಎರಡನೇ ವಿಭಾಗದ ವಂಡ್ರಾಣಿಕಲ್ ಕುಟ್ಟಾಯಿ ಎಂಬವರ ಮನೆಯ ಸಮೀಪದಲ್ಲಿ ಹತ್ತಕ್ಕೂ ಅಧಿಕ ಮನೆಗಳಿದ್ದು, ಈ ವ್ಯಾಪ್ತಿಯ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ನಿವಾಸಿಗಳು ರಸ್ತೆ ದುರಸ್ತಿಮಾಡುವಂತೆ ಗ್ರಾ.ಪಂ ಮೊರೆ ಹೋಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆ ಸ್ಥಳೀಯ ನಿವಾಸಿಗಳು ಸೇರಿ ಹದಗೆಟ್ಟ ರಸ್ತೆಗೆ ಕಲ್ಲು, ಮಣ್ಣು ಹಾಕಿ ದುರಸ್ತಿಗೆ ಮುಂದಾಗುವ ಮೂಲಕ ಗ್ರಾ.ಪಂ ಹಾಗೂ ಗ್ರಾ.ಪಂ ಸದಸ್ಯರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಬಣ್ಣದ ಮಾತುಗಳನ್ನು ಹೇಳುತ್ತಾ ಮನೆ ಮನೆಗೆ ಮತಯಾಚನೆಗೆ ಬರುವವರಿಗೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಸಿದರು. ಈ ಸಂದÀರ್ಭ ವಿ.ಎಸ್. ಸುದೀಶ್, ರಂಜಿತ್, ಮಣಿ, ಸೇರಿದಂತೆ ಇನ್ನಿತರರು ಹಾಜರಿದ್ದರು.