ಮಡಿಕೇರಿ, ಅ. ೨೮: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ಯ ಮಾರಾಟಗಾರರಿಂದ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಮದ್ಯ ಮಾರಾಟಗಾರರು ಭಾಗವಹಿಸಿದರು.
ಮದ್ಯ ಮಾರಾಟ ಮೇಲಿನ ಲಾಭದ ಶೇಕಡವಾರನ್ನು ಕಡಿಮೆಗೊಳಿಸಿರುವುದು, ಬಲವಂತವಾಗಿ ಮದ್ಯ ಮಾರಾಟಗಾರರಿಂದ ಅಬಕಾರಿ ಅಧಿಕಾರಿಗಳು ಹಣ ಪಡೆಯುತ್ತಿರುವುದು, ಗುರಿ ನೆಪದಲ್ಲಿ ದಂಡ ವಿಧಿಸಿ ತೊಂದರೆ ನೀಡುತ್ತಿರುವುದು, ಅನಾವಶ್ಯಕ ವಿಷಯಗಳಿಗೆ ಮದ್ಯದಂಗಡಿಯನ್ನು ಮುಚ್ಚಿಸುವುದು, ಪರವಾನಗಿ ನವೀಕರಣಕ್ಕೆ ತೊಂದರೆಯಾಗುತ್ತಿರುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನೆ ಮೂಲಕ ಒತ್ತಾಯಿಸಲಾಯಿತು.
ಅಬಕಾರಿ ಹಿರಿಯ ಅಧಿಕಾರಿಗಳು ಆಗಮಿಸಿ ಸನ್ನದುದಾರರ ಮನವಿ ಪತ್ರ ಸ್ವೀಕರಿಸಿದರು. ಕೊಡಗು ಜಿಲ್ಲಾ ಲಿಕ್ಕರ್ ಅಸೋಸಿಯೇಷನ್ ಕಾರ್ಯದರ್ಶಿ ಬಿ.ಎಸ್. ಸುಂದರ್ ನೇತೃತ್ವದಲ್ಲಿ ಜಿಲ್ಲೆಯ ಮದ್ಯ ಮಾರಾಟಗಾರರು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದರು. ಬೇಡಿಕೆ ಈಡೇರದಿದ್ದಲ್ಲಿ ನ. ೨೦ ರಂದು ಮದ್ಯದಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲು ನಿರ್ಣಯಿಸಲಾಗಿದೆ ಎಂದು ಸುಂದರ್ ಮಾಹಿತಿ ನೀಡಿದರು.