ಹೆಬ್ಬಾಲೆ, ಅ. ೨೮: ಹೆಬ್ಬಾಲೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಹೆಚ್.ಪಿ. ಅರುಣಾಕುಮಾರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಆಡಳಿತ ಮಂಡಳಿ ಸಭೆಯ ಹಾಗೂ ವಾರ್ಡ್ ಸದಸ್ಯರ ಗಮನಕ್ಕೆ ತರದೆ ವ್ಯಾಪಾರಿಯೊಬ್ಬರಿಗೆ ವ್ಯಾಪಾರ ಪರವಾನಗಿ ನೀಡಿರುವು ದರ ಬಗ್ಗೆ ಸದಸ್ಯ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇದರಿಂದ ಒಂದು ತಾಸಿಗೂ ಹೆಚ್ಚು ಕಾಲ ತೀವ್ರ ಚರ್ಚೆ ನಡೆಯಿತು. ಸಭೆ ಗೊಂದಲದ ಗೂಡಾಯಿತು.

ಸದಸ್ಯರು ಪರಸ್ಪರ ನಿಂದನೆ, ಕೋಲಾಹಲಕ್ಕೆ ಕಾರಣವಾಯಿತು. ಲೈಸೆನ್ಸ್ ಕೊಡುವ ವಿಚಾರ, ಬಿಲ್ಲು ಪಾಸ್ ಮಾಡುವ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಅಧ್ಯಕ್ಷರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಪAಚಾಯಿತಿ ವ್ಯಾಪ್ತಿಯಲ್ಲಿ ಲೈಸನ್ಸ್ ನವೀಕರಣ ಮಾಡದೆ ಕಾರ್ಯನಿರ್ವಹಿಸುತ್ತಿರುವ ಶುಂಠಿ ವಾಷಿಂಗ್ ಮಿಷನ್‌ಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದರು. ಸದಸ್ಯ ಮಂಜುನಾಥ್ ಮಾತನಾಡಿ, ಕೆಲವು ಶುಂಠಿ ವಾಷಿಂಗ್ ಮಿಷನ್‌ಗಳ ದಾಖಲೆ ಗಳು ಸರಿಯಿಲ್ಲ. ಈ ಬಗ್ಗೆ ರಿನಿವಲ್ ಮಾಡುವಾಗ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ವಾರ್ಡ್ ಸದಸ್ಯರ ಗಮನಕ್ಕೆ ತರದೆ ವ್ಯಾಪಾರ ಪರವಾನಗಿ ನೀಡಿರುವ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ವ್ಯಾಪಾರ ಲೆಸನ್ಸ್ ಅನ್ನು ಸಭೆಯ ಗಮನಕ್ಕೆ ತಂದು ಅನುಮತಿ ಪಡೆದು ನೀಡಲು ತೀರ್ಮಾನಿಸಲಾಯಿತು. ಪಂಚಾಯಿತಿಗೆ ಮಾಸಿಕ ಬಾಡಿಗೆ ಹಣ ಸಂದಾಯ ಮಾಡದ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿ ಎಂದು ಪರಮೇಶ್, ಮಹಾದೇವ, ಮಂಜುನಾಥ್ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅರುಣಾಕುಮಾರಿ ಮೊದಲು ಮಳಿಗೆಗಳಿಗೆ ನೋಟೀಸ್ ನೀಡಿ ನಂತರ ಶಿಸ್ತು ಕ್ರಮ ಕೈಗೊಳ್ಳ ಲಾಗುತ್ತದೆ ಎಂದರು. ಮುಂದಿನ ನವೆಂಬರ್‌ನಲ್ಲಿ ಗ್ರಾಮದೇವತೆ ಹಬ್ಬ ಇರುವುದರಿಂದ ಬೀದಿ ದೀಪಗಳ ಅಳವಡಿಕೆಗೆ ಟೆಂಡರ್ ಕರೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಒಂದು ವರ್ಷ ನಿರ್ವಹಣೆ ಕೂಡ ಟೆಂಡರ್‌ದಾರರೇ ಮಾಡುವಂತೆ ಸೂಚನೆ ನೀಡಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.

ಗ್ರಾಮದಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಪೌರ ಕಾರ್ಮಿಕನಿಗೆ ಸಂಬಳ ನೀಡುತ್ತಿರುವುದರ ಬಗ್ಗೆ ಸದಸ್ಯ ತನುಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಪೌರ ಕಾರ್ಮಿಕರನ್ನು ಪೈಪ್‌ಲೈನ್ ಕೆಲಸಕ್ಕೆ ನಿಯೋಜನೆ ಮಾಡಬೇಡಿ ಎಂದು ಹೇಳಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಂದಾಯ ಹಾಗೂ ನೀರು ಕಂದಾಯ ಬಾಕಿ ಇದ್ದು, ವಸೂಲಾತಿಗೆ ಕ್ರಮ ಕೈಗೊಳ್ಳಬೇಕು ಎಂದರು. ಗ್ರಾಮದ ಆರೋಗ್ಯ ಕೇಂದ್ರ ಹಾಗೂ ಶಾಲೆಗಳ ಸುತ್ತ ಬೆಳೆದಿರುವ ಗಿಡಗಂಟಿಗಳನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಶವ ಸಂಸ್ಕಾರಕ್ಕಾಗಿ ರೂ. ಐದು ಸಾವಿರ ಸಹಾಯಧನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು.

ದುರಸ್ತಿಗೀಡಾಗಿರುವ ಬೋರ್‌ವೆಲ್ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ನಾರಾಯಣ ಒತ್ತಾಯಿಸಿದರು. ಕಾರ್ಯದರ್ಶಿ ಸುರೇಶ್ ಅವರು ಹಿಂದಿನ ಸಭೆ ನಡಾವಳಿ ಹಾಗೂ ಲೆಕ್ಕಪತ್ರ ಓದಿ ಅಂಗೀಕಾರ ಪಡೆದರು.

ಸಭೆಯಲ್ಲಿ ಉಪಾಧ್ಯಕ್ಷೆ ಲತಾ, ಸದಸ್ಯರಾದ ಶಿವನಂಜಪ್ಪ, ಮಹಾದೇವ್, ಪವಿತ್ರಾ, ಪುಟ್ಟಲಕ್ಷ್ಮಮ್ಮ, ರತ್ನಮ್ಮ, ಯಶಸ್ಸಿನಿ, ಚಂದ್ರಶೇಖರ್, ಅಭಿವೃದ್ಧಿ ಅಧಿಕಾರಿ ಮೇದಪ್ಪ ಪಾಲ್ಗೊಂಡಿದ್ದರು.