ಕೂಡಿಗೆ, ಅ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನ ಹೊಸೂರು ವ್ಯಾಪ್ತಿಯಲ್ಲಿ ಕಳೆದ ೨೦ ದಿನಗಳಿಂದಲೂ ಆನೆಕಾಡು ಮೀಸಲು ಅರಣ್ಯ ಪ್ರದೇಶ ಕಡೆಯಿಂದ ಬಂದ ಕಾಡಾನೆಗಳು ಬೆಂಡೆಬೆಟ್ಟ ಸಮೀಪದ ಹಾರಂಗಿ ನದಿಯನ್ನು ದಾಟಿಕೊಂಡು ನದಿಯಂಚಿನ ಭತ್ತದ ಬೆಳೆಯ ಗದ್ದೆಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ಯಡವನಾಡು ಮೀಸಲು ಅರಣ್ಯ ಪ್ರದೇಶ ಕಡೆಯಿಂದಲೂ ಸಹ ಬರುವ ಕಾಡಾನೆಗಳು ಹುದುಗೂರು, ಕಾಳಿದೇವನ ಹೊಸೂರು ವ್ಯಾಪ್ತಿಯ ರೈತರ ಜಮೀನಿಗೆ ದಿನಂಪ್ರತಿ ದಾಳಿ ಮಾಡಿ ಭತ್ತ, ಅಡಿಕೆ ಸೇರಿದಂತೆ ಉಪ ಬೆಳೆಗಳನ್ನು ತಿಂದು ತುಳಿದು ಅಪಾರ ಪ್ರಮಾಣದಲ್ಲಿ ಬೆಳೆಯನ್ನು ನಷ್ಟ ಪಡಿಸುತ್ತಿವೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಇಲಾಖೆಯ ಮುಖೇನ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹುದುಗೂರು, ಕಾಳಿದೇವನ ಹೊಸೂರು ಗ್ರಾಮಗಳ ಸುತ್ತಲೂ ಮೀಸಲು ಅರಣ್ಯ ಪ್ರದೇಶವಾಗಿದ್ದು, ಕಾಡಾನೆಗಳು ಒಂದು ಬದಿಯಲ್ಲಿ ಹಾರಂಗಿ ನದಿಯನ್ನು ದಾಟಿ ಬಂದರೆ, ಇನ್ನೊಂದು ಕಡೆ ಅಂದರೆ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿನ ಕಾಡಾನೆಗಳು ನಾಲೆಯ ಏರಿಯ ಮೂಲಕ ಕಂದಕವನ್ನು ದಾಟಿಕೊಂಡು ಬರುತ್ತಿವೆ, ಯಡವನಾಡು ಮೀಸಲು ಅರಣ್ಯ ಪ್ರದೇಶವು ಹುದುಗೂರು ಕಾಳಿದೇವನ ಹೊಸೂರು ಮದಲಾಪುರ ಸೀಗೆಹೊಸೂರು ವ್ಯಾಪ್ತಿಯವರೆಗೆ ಇರುವುದರಿಂದಾಗಿ ಕಾಡಾನೆಗಳು ಈ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಕಂದಕವನ್ನು ದಾಟಿಕೊಂಡು ಬರುತ್ತಿವೆ.
ಅಲ್ಲದೇ ಬೆಂಡೆಬೆಟ್ಟದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಕಾಡಾನೆಗೆ ರೇಡಿಯೋ ಕಾಲರ್ ಮಾದರಿ ಬೆಲ್ಟ್ ಇರುವ ಕಾಡಾನೆ ಕಂಡುಬರುತ್ತದೆ ಅದರಿಂದಾಗಿ ಅರಣ್ಯ ಇಲಾಖೆಯವರು ಸಾಕಾನೆಗಳ ಸಹಾಯದಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕೆಂಬದು ಗ್ರಾಮಸ್ಥರ ಅಗ್ರಹವಾಗಿದೆ.
ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಕಾಡಾನೆಗಳನ್ನು ಓಡಿಸುವ ವಿಶೇಷ ತಂಡವನ್ನು ಈ ವ್ಯಾಪ್ತಿಯಲ್ಲಿ ದಿನಂಪ್ರತಿ, ನಿಯೋಜನೆ ಮಾಡಿದರೂ ಕಾಡಾನೆಗಳು ಒಂದು ಕಡೆಯಲ್ಲಿ ಕಾಯ್ದು ಕುಳಿತರೂ, ಇನ್ನೊಂದು ಕಡೆಯಿಂದ ಬಂದು ರೈತರ ಜಮೀನಿನಲ್ಲಿ ಬೆಳೆ ನಷ್ಟ ಪಡಿಸುತ್ತಿವೆ.
ಈ ವ್ಯಾಪ್ತಿಯ ರೈತರು ಎಷ್ಟೆ ಪಟಾಕಿ ಸಿಡಿಸಿದರೂ ಕಾಡಾನೆಗಳು ಜಮೀನಿನಲ್ಲಿ ಬೆಳೆಯನ್ನು ತಿಂದು ಹೋಗುತ್ತಿವೆ. ಇದರಿಂದಾಗಿ ಈ ಸಾಲಿನಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಬೆಳೆಯು ಸಂಪೂರ್ಣವಾಗಿ ಕಾಡಾನೆಗಳಿಗೆ ಆಹಾರವಾಗುತ್ತಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಸೇರಿದಂತೆ ಅನೇಕ ಅಧಿಕಾರಿಗಳ ತಂಡದವರು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ಸಹ ಇದೀಗ ಕಾಡಾನೆ ಓಡಿಸುವ ವಿಶೇಷ ತಂಡದವರನ್ನು ಸಹ ಕಣ್ಣು ತಪ್ಪಿಸಿ ರೈತರ ಜಮೀನಿಗೆ ಕಾಡಾನೆಗಳು ದಾಳಿ ಮಾಡುತ್ತಿವೆ,
ಇಲಾಖೆಯ ಯೋಜನೆ ಮುಂದಿನ ಸಾಲಿಗೆ, ಅಂದರೆ ಇದೀಗ ಬೆಳೆದ ಬೆಳೆ ಸಂಪೂರ್ಣವಾಗಿ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಕ್ರಮವನ್ನು ಕೈಗೊಳ್ಳುವಂತೆ ಹುದುಗೂರು ಕಾಳಿದೇವನ ಹೊಸೂರು ವ್ಯಾಪ್ತಿಯ ರೈತರ ಒತ್ತಾಯವಾಗಿದೆ.