ಸುಂಟಿಕೊಪ್ಪ, ಅ. ೨೯: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡದ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಗಳಾದ ತಾಲೂಕು ವೈದ್ಯಾಧಿಕಾರಿ ಡಾ. ಇಂದೂಧರ್ ಆರೋಗ್ಯ ತರಬೇತಿಯನ್ನು ನೀಡಿದರು.
ಕಂಬಿಬಾಣೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಆರೋಗ್ಯ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದ ಡಾ. ಇಂದೂಧರ್, ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯ ವಂತರಾಗಿ ಬದುಕುಬೇಕೆನ್ನುವ ನಿಟ್ಟಿಯಲ್ಲಿ ಸರಕಾರವು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ತಂಡವನ್ನು ರಚಿಸುವ ಮೂಲಕ ಆರೋಗ್ಯವಂತ ಗ್ರಾಮವನ್ನಾಗಿಸಲು ಮುಂದಾಗಿದೆ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಮತಿ ಮಾತನಾಡಿ, ಸರಕಾರ ನಿಯೋಜಿಸಿರುವ ಗ್ರಾಮ ಪಂಚಾಯಿತಿ ಕಾರ್ಯಪಡೆ ತಂಡದ ಸದಸ್ಯರು ಅನಾರೋಗ್ಯ ಪೀಡಿತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಮಾಡಲಿದ್ದಾರೆ ಎಂದರು.
ತಾಲೂಕು ಬಿಎಚ್‌ಇಓ ಶಾಂತಿ ಆರೋಗ್ಯ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಉಪಾಧ್ಯಕ್ಷ ಶಂಕರ್ ಸದಸ್ಯರುಗಳಾದ ಆರ್.ಆರ್. ಮೋಹನ್, ಅಶ್ವಿನಿ, ಮಧುನಾಗಪ್ಪ ಇದ್ದರು.
ಶಾಲಾ ಶಿಕ್ಷಕರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.