ಮಡಿಕೇರಿ, ಅ. ೨೯: ಲೇಖಕರಿಗೆ ತಾಳ್ಮೆ ಮುಖ್ಯ, ಓದುಗರ ಮನಸ್ಸನ್ನು ಗ್ರಹಿಸುವ ಶಕ್ತಿ ಇರಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ. ರಾಘವ ಹೇಳಿದರು. ನಗರದ ಪತ್ರಿಕಾಭವನದ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟದ ೯೯ನೇ ಪುಸ್ತಕ, ಲೇಖಕಿ ತೆನ್ನೀರ ಟೀನಾ ಚಂಗಪ್ಪ ರಚಿಸಿರುವ "ಮಣ್ಣ್ರ ಋಣ" ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಯಾರೂ ಮರೆಯಬಾರದು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ನಾವು ಅನುಸರಿಸುವ ಸಂಸ್ಕೃತಿ, ಆಚಾರ, ವಿಚಾರ, ಭಾಷೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಲೇಖಕರಿಗೆ ಸಾಮಾಜಿಕ ಬದ್ಧತೆ ಇರಬೇಕು. ಬರಹಗಳು ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿರಬೇಕು ಎಂದರು. "ಮಣ್ಣ್ರ ಋಣ" ಕೃತಿಯು ಸಮಾಜಕ್ಕೆ ಬೇಕಾದ ಉತ್ತಮ ಸಂದೇಶವನ್ನು ಒಳಗೊಂಡಿದೆ ಎಂದರು.
"ಮಣ್ಣ್ರ ಋಣ" ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲೆ ಡಾ.ಬೊಜ್ಜಂಗಡ ಅವನಿಜ ಸೋಮಯ್ಯ, ಪ್ರಸ್ತುತ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಯುವಜನತೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಸಾಹಿತ್ಯಾಸಕ್ತಿ ಬೆಳೆಸುವುದು ಅವಶ್ಯವಾಗಿದ್ದು, ಶಿಕ್ಷಕರು ಉತ್ತಮ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕಿದೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ತೆನ್ನೀರ ಡಾಟಿ ಗಣೇಶ್ ಮಾತನಾಡಿ, ಮನೆಯೇ ಮೊದಲ ಪಾಠಶಾಲೆ ಎಂಬAತೆ, ಪೋಷಕರು ಮಕ್ಕಳಿಗೆ ಪುಸ್ತಕ ಓದಲು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಯಶಸ್ಸಿನ ಜೊತೆಗೆ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ತಮ್ಮ ಕೊಡುಗೆಯನ್ನು ನೀಡಬೇಕು. ಇದರಿಂದ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
"ಮಣ್ಣ್ರ ಋಣ" ಪುಸ್ತಕದ ಲೇಖಕಿ ತೆನ್ನೀರ ಟೀನಾ ಚಂಗಪ್ಪ ಮಾತನಾಡಿ, ಪುಸ್ತಕಗಳು ಪ್ರಕಟ ಗೊಳ್ಳಬೇಕಾದರೆ ದಾನಿಗಳ ಸಹಕಾರದ ಅಗತ್ಯವಿದೆ. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾ ಸಕ್ತರನ್ನು ಪ್ರೋತ್ಸಾಹಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಕೊಡಗೆ ನೀಡುವಂತಾಗಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೂಟದ ಮೂಲಕ ಕೊಡವ ಸಂಸ್ಕöÈತಿಯ ಬಗ್ಗೆ ಯುವಜನತೆಯಲ್ಲಿ ನಿರಂತರವಾಗಿ ಜಾಗೃತಿ ಹಾಗೂ ಆಸಕ್ತಿಯನ್ನು ಮೂಡಿಸುತ್ತಾ ಬರಲಾಗುತ್ತಿದೆ. ಕೊಡವ ಮಕ್ಕಡ ಕೂಟ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ, ಪುಸ್ತಕಗಳನ್ನು ಪ್ರಕಟಿಸಿ ಉತ್ತೇಜನ ನೀಡಿದೆ ಎಂದರು. ಕೊಡವ ಮಕ್ಕಡ ಕೂಟದ ನಿರಂತರ ಪ್ರಯತ್ನದಿಂದ ಮಡಿಕೇರಿಯ "ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ" ವೃತ್ತದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದಿಂದ "ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ" ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವೀರ ಯೋಧನ ನೆನಪನ್ನು ಚಿರಾಯುವಾಗಿಸಿರುವ ಹೆಗ್ಗಳಿಕೆ ಕೊಡವ ಮಕ್ಕಡ ಕೂಟಕ್ಕಿದೆ.
ಕೊಡವ ಮಕ್ಕಡ ಕೂಟ ಇಲ್ಲಿಯವರೆಗೆ ೯೯ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದೆ. ನವೆಂಬರ್ ೨೪ ರಂದು ದಾಖಲೆಯ ೧೦೦ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಅವರ ಸಂಪಾದಕತ್ವದ "ನೂರನೆ ಮೊಟ್ಟ್" ಸೇರಿದಂತೆ ಲೇಖಕರಾದ ಐಚಂಡ ರಶ್ಮಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನೀರ ಟೀನಾ ಚಂಗಪ್ಪ, ಯಶೋಧ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಹೇಳಿದರು. ಬೊಟ್ಟೋಳಂಡ ನಿವ್ಯ ದೇವಯ್ಯ ಪ್ರಾರ್ಥಿಸಿ, ಐಚಂಡ ರಶ್ಮಿ ಮೇದಪ್ಪ ನಿರೂಪಿಸಿ, ಉಡುವೆರ ರೇಖಾ ರಘು ಸ್ವಾಗತಿಸಿ, ಕುಳುವಂಡ ಶೃತಿ ಪೂಣಚ್ಚ ವಂದಿಸಿದರು.