ಗುಡ್ಡೆಹೊಸೂರು, ಅ. ೩೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಆರೋಗ್ಯ ಇಲಾಖೆ ಮತ್ತು ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ದೊಡ್ಡ ಬೆಟ್ಟಗೇರಿ ಗ್ರಾಮದ ಸಮುದಾಯ ಭವನದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಮಿಕ ಅಧಿಕಾರಿ ಕಾವೇರಿ ಟಿ ವಹಿಸಿದ್ದರು. ಕಾರ್ಯಾಗಾರದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖಾ ಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಗೆ ಸೇರಿದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಕಾರ್ಯದರ್ಶಿಗಳು ಆದ ಶುಭ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಾಲಕಾರ್ಮಿಕ ಅನಿಷ್ಟ ಪದ್ಧತಿಯ ಬಗ್ಗೆ ಮತ್ತು ಪೋಷಕರು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿ ದುಡಿಯುವುದನ್ನು ತಪ್ಪಿಸಬೇಕಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಕುಶಾಲನಗದ ಪೊಲೀಸ್ ವೃತ್ತ ನಿರೀಕ್ಷಕ ಮೋಹನ್ ರಾಜ್ ಅವರು ಕಾನೂನು ರೀತಿಯಲ್ಲಿ ಅಪರಾಧ ಎಂಬುದಾಗಿ ವಿವರಿಸಿದರು.

ಕ್ಷೇತ್ರದ ಶಿಕ್ಷಣಾಧಿಕಾರಿ ಎಸ್. ಭಾಗ್ಯಮ್ಮ ಮಾತನಾಡಿ, ಬಾಲ ಕಾರ್ಮಿಕರನ್ನಾಗಿ ತಮ್ಮ ಮಕ್ಕಳನ್ನು ದುಡಿಸಿ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ನೆರೆದಿದ್ದ ಹಾಡಿಯ ಪೋಷಕರಿಗೆ ಮನವರಿಕೆ ಮಾಡಿದರು. ಈ ಸಂದರ್ಭ ಹಾಡಿಯ ಮುಖಂಡರಾದ ಅನಿತ ಬಿ.ಆರ್ ಮಾತನಾಡಿದರು.

ವೇದಿಕೆಯಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ರುಕ್ಮೀಣಿ, ಉಪಾಧ್ಯಕ್ಷ ಪಟ್ಟು ಮಾದಪ್ಪ, ಸದಸ್ಯರಾದ ಕೆ.ಕೆ. ಚಿದಾನಂದ, ಗಂಗಮ್ಮ, ನಾರಾಯಣ, ಸುಮ, ಸೌಮ್ಯ ಹಾಜರಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನೆ ನಿರ್ದೇಶಕ ಆರ್. ಶೀರಾಜ್ ಅಹ್ಮದ್ ಮಾತನಾಡಿದರು. ಕಾರ್ಮಿಕ ನಿರೀಕ್ಷಕ ಶಶಿಧರ ಹಾಜರಿದ್ದರು.

ಜಯಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಸಹಾಯವಾಣಿ ವಿಷಯ ನಿರ್ವಾಹಕರಾದ ಯೋಗೇಶ್ ಎಸ್. ಹಾಜರಿದ್ದರು, ಕಾನೂನು ಪ್ರಾಧಿಕಾರದ ಅಧಿಕಾರಿ ಜೋಯಪ್ಪ ವಂದಿಸಿದರು.

ಈ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖಾಧಿಕಾರಿ ಕೇಶಿಣಿ, ಮತ್ತು ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು, ಹಾಡಿಯ ಸಾರ್ವಜನಿಕರು ಹಾಜರಿದ್ದರು.