ಕೂಡಿಗೆ, ಅ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಭುವನಗಿರಿ ಗ್ರಾಮದಿಂದ ಭುವನಗಿರಿ-ಕಣಿವೆ-ಯಲಕನೂರು-ಹೊಸಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. ೧೫ ಕೋಟಿ ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿಯು ಆರಂಭಗೊಳಲಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಕೂಡಿಗೆಯಲ್ಲಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯವನ್ನು ನೆರವೇರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಈ ಮಾರ್ಗದ ರಸ್ತೆಯು ತೀರಾ ಹದಗೆಟ್ಟಿದ್ದು, ಈ ವ್ಯಾಪ್ತಿಯ ಹತ್ತಕ್ಕೂ ಅಧಿಕ ಗ್ರಾಮಗಳ ನಿವಾಸಿಗಳಿಗೆ ತೀವ್ರತರವಾದ ಅನಾನುಕೂಲ ಉಂಟಾಗಿತ್ತು. ಇದೀಗ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಅನುಮೋದನೆಗೊಂಡಿದ್ದು, ರಸ್ತೆ ಅಭಿವೃದ್ಧಿಗೆ ರೂ. ೧೫ ಕೋಟಿ ಅನುದಾನ ಬಿಡುಗಡೆಗೊಂಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಯು ಸಹ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸದ್ಯದಲ್ಲಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ ಈ ಸಾಲಿನಲ್ಲಿ ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಸಂಪರ್ಕ ರಸ್ತೆ ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.