ಸೋಮವಾರಪೇಟೆ, ಅ. ೩೧: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನವೆಂಬರ್ ೨೪ ರಂದು ಕನ್ನಡ ರಾಜ್ಯೋತ್ಸವ ನಡೆಸಲು ಉದ್ದೇಶಿಸಲಾಗಿದ್ದು, ಇದರ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ನ. ೧೮ ರಂದು ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬಿಇಓ ಎಸ್. ಭಾಗ್ಯಮ್ಮ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು, ಪ್ರತಿ ಶಾಲಾ, ಕಾಲೇಜಿನಿಂದ ಮೂರು ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದೆ.

ಪ್ರಾಥಮಿಕ, ಪ್ರೌಢಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕನ್ನಡ ನಾಡು ನುಡಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಕೊಡುಗೆಗಳ ಬಗ್ಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ. ಇದೇ ವಿಭಾಗದಲ್ಲಿ ೪ ರಿಂದ ೮ ಜನರ ತಂಡಗಳಿಗೆ ದೇಶಭಕ್ತಿ ಗೀತೆ ಹಾಗೂ ಜಾನಪದ ಗೀತೆ ಮತ್ತು ಕನ್ನಡ ಗೀತೆಗಳಿಗೆ ಸಮೂಹ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.

ಅಂತೆಯೇ ೪ ರಿಂದ ೧೨ ಜನರ ತಂಡಕ್ಕೆ ಜಾನಪದ ಅಥವಾ ಕನ್ನಡ ಹಾಡುಗಳಿಗೆ ನೃತ್ಯ ಸ್ಪರ್ಧೆ, ಯು.ಕೆ.ಜಿ ಯಿಂದ ೩ನೇ ತರಗತಿ, ೪ ರಿಂದ ೭ ಹಾಗೂ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಯಲಿದೆ.

ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ. ೧೦೦ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: ೮೮೬೧೫೫೦೪೪೪ ಸಂಖ್ಯೆಯನ್ನು ಸಂಪರ್ಕಿಸುವAತೆ ಗೌರವ ಕಾರ್ಯದರ್ಶಿ ಎ.ಪಿ. ವೀರರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.