ಮಡಿಕೇರಿ, ನ. ೪: ಹೋಬಳಿ ಮಟ್ಟದಲ್ಲಿ ಸಮುದಾಯ ಕೃಷಿಕ ಗುಂಪುಗಳನ್ನು ಪ್ರಾರಂಭಿಸುವ ಮೂಲಕ ಆಯಾ ವಲಯಗಳಲ್ಲಿರುವ ಕಾಫಿ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದು ಗುಣಮಟ್ಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ವಿನೂತನ ಯೋಜನೆ ಭಾರತೀಯ ಕಾಫಿ ಮಂಡಳಿ ಮುಂದಿದೆ ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಡಾ. ಕೆ.ಜಿ. ಜಗದೀಶ್ ಹೇಳಿದರು

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್‌ನ (ಸಿಪಿಎ) ೧೪೫ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಜಗದೀಶ್, ಕಾಫಿ ಬೆಳೆಯ ಗುಣಮಟ್ಟಕ್ಕೆ ಆದ್ಯತೆ ನೀಡಿದಾಗ ಭಾರತೀಯ ಕಾಫಿ ಬೆಳೆಗೆ ಎಂದಿಗೂ ಹಿನ್ನಡೆಯಾಗಲಾರದು. ಈ ನಿಟ್ಟಿನಲ್ಲಿ ಕಾಫಿ ಬೆಳೆಯ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಪ್ರತೀ ಹೋಬಳಿಯಲ್ಲಿಯೂ ೧೦೦ ಕೃಷಿಕರನ್ನೊಳಗೊಂಡ ಸಮುದಾಯ ಗುಂಪನ್ನು ಪ್ರಾರಂಭಿಸಿ, ಅವರು ಬೆಳೆದ ಕಾಫಿಯನ್ನು ಸಂಗ್ರಹಿಸಿ ಅದರ ಗುಣಮಟ್ಟದ ಬಗ್ಗೆ (ಕಾಫಿ ಕಪ್ಪಿಂಗ್ ಸ್ಕೋರ್) ಪ್ರಯೋಗಾಲಯದಿಂದ ಮಾಹಿತಿ ಪಡೆಯಲಾಗುತ್ತದೆ, ಗುಣಮಟ್ಟ ಹೆಚ್ಚಳವಾಗಬೇಕೆಂದಾದಲ್ಲಿ ಯಾವ ರೀತಿ ಗುಣಮಟ್ಟ ಹೆಚ್ಚಳ ಮಾಡಬಹುದು ಎಂಬ ಬಗ್ಗೆಯೂ ಕಾಫಿ ಮಂಡಳಿಯಿAದ ಸೂಕ್ತ ಮಾಹಿತಿಯನ್ನು ತಜ್ಞರು ಕೃಷಿಕರಿಗೆ ನೀಡಲಿದ್ದಾರೆ. ಈ ಯೋಜನೆಯಿಂದ ಪ್ರತೀ ಗ್ರಾಮದ ಕಾಫಿ ಕೃಷಿಕರಿಗೆ ಕಾಫಿಯ ಗುಣಮಟ್ಟ ಹೆಚ್ಚಳ ಕಾಪಾಡಿಕೊಳ್ಳಲು ಸಾಧ್ಯವಾಗಿ ಉತ್ತಮ ಬೆಲೆಯನ್ನು ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಭಾರತೀಯ ಕಾಫಿ ಮಂಡಳಿಯಿAದ ಶೀಘ್ರದಲ್ಲಿಯೇ ೨ ವರ್ಷಗಳ ಡಿಪ್ಲೋಮ ಪದವಿಯನ್ನು ನೀಡಲಾಗುತ್ತದೆ. ಇದರಿಂದಾಗಿ ಯುವಪೀಳಿಗೆಯು ಕಾಫಿ ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದ ಡಾ ಜಗದೀಶ್, ತೋಟ ನಿರ್ವಹಣೆಗೆ ಸೂಕ್ತ ತರಬೇತಿ ಹೊಂದಿದವರ ಕೊರತೆಯನ್ನು ಗಮನಿಸಿ ಕಾಫಿ ಮಂಡಳಿಯು ತೋಟಗಳ ಸೂಪರ್ ವೈಸರ್‌ಗಳು ಮತ್ತು ವ್ಯವಸ್ಥಾಪಕರಾಗಿ ತರಬೇತಿ ನೀಡುವ ಯೋಜನೆ ಪ್ರಾರಂಭಿಸಲಿದೆ, ೧೦ನೇ ತರಗತಿ ಉತ್ತೀರ್ಣರಾದವರು ಈ ತರಬೇತಿಯನ್ನು ಪಡೆಯುವ ಮೂಲಕ ಕಾಫಿ ತೋಟಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಅಂತೆಯೇ ಹೆಚ್ಚುತ್ತಿರುವ ಕಾಫಿ ಕೆಫೆಗಳಿಗೆ ಸೂಕ್ತ ಸಿಬ್ಬಂದಿ ಅಗತ್ಯತೆಯನ್ನು ಮನಗಂಡು ಮಹಿಳೆಯರು, ಮಕ್ಕಳೂ ಸೇರಿದಂತೆ ಆಸಕ್ತಿಯುಳ್ಳವರಿಗೆ ಕೆಫೆ ಬರಿಸ್ಟಾ (ಕೆಫೆ ನಿರ್ವಾಹಕರು) ತರಬೇತಿಯನ್ನು ನೀಡುವ ಯೋಜನೆ ಮಂಡಳಿಯ ಮುಂದಿದೆ. ಈ ಮೂಲಕ ಕಾಫಿ ತೋಟಗಳಿಗೆ ಬರುವ ಸಂದರ್ಶಕರು, ಪ್ರವಾಸಿಗರಿಗೂ ಉತ್ತಮ ಗುಣಮಟ್ಟದ ಸ್ವಾದಿಷ್ಟ ಕಾಫಿಯನ್ನು ತಯಾರಿಸಿ ನೀಡಬಹುದಾಗಿದೆ ಎಂದೂ ಡಾ ಜಗದೀಶ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕೊಡಗಿನಲ್ಲಿ ಪರಿಸರ ಸ್ನೇಹಿ ಕಾಫಿ ಪ್ರವಾಸೋದ್ಯಮದ ಮೂಲಕ ಕಾಫಿ ತೋಟಗಳಿಗೆ ಸಂದರ್ಶಕರನ್ನು ಕರೆತರಲು ಸಾಧ್ಯವಿದೆ ಎಂದು ಸಲಹೆ ನೀಡಿದ ಜಗದೀಶ್, ಈ ನಿಟ್ಟಿನಲ್ಲಿ ಕಾಫಿ ತೋಟಗಳನ್ನು ಪರಿಸರ ಸ್ನೇಹಿಯಾಗಿ ಸಂರಕ್ಷಿಸಿಕೊಳ್ಳುವ ಹೊಣೆಗಾರಿಕೆ ತೋಟ ಮಾಲೀಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಸೇರಿದಂತೆ ಕರ್ನಾಟಕದ ಕಾಫಿ ತೋಟಗಳಲ್ಲಿ ಹಲವಷ್ಟು ಜೀವವೈವಿಧ್ಯತೆಗಳಿವೆ, ಇದನ್ನೇ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಕಾಫಿ ತೋಟಗಳಲ್ಲಿನ ವಿಶಿಷ್ಟತೆಗಳ ಕಥೆ ಹೇಳುವಂತಾಗಬೇಕೆAದು ಸಲಹೆ ನೀಡಿದರು.

ಹವಮಾನ ಬದಲಾವಣೆ ಎಂಬುದು ವಿಶ್ವವ್ಯಾಪಿಯಾಗಿದೆ, ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಒಂದಾಗಿ ಚಿಂತನೆ ಹರಿಸಿ

(ಮೊದಲ ಪುಟದಿಂದ) ವಿಕೋಪ ಸಂದರ್ಭ ಯಾವ ರೀತಿ ಕಾಫಿ ಸಮುದಾಯದ ಹಿತರಕ್ಷಣೆ ಮಾಡಬಹುದು ಎಂಬ ಬಗ್ಗೆ ಕಾಳಜಿ ತೋರಬೇಕು ಎಂದು ಹೇಳಿದರು.

ಭವಿಷ್ಯದಲ್ಲಿ ಕಾರ್ಮಿಕರ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಹಿನ್ನಲೆಯಲ್ಲಿ ಶೇ.೬೦ ರಷ್ಟು ತೋಟವನ್ನಾದರೂ ಯಾಂತ್ರೀಕರಣಕ್ಕೆ ಒಳಪಡಿಸುವ ಅನಿವಾರ್ಯತೆ ಕಾಫಿ ಕೃಷಿಕರಿಗೆ ಇದೆ ಇದನ್ನು ಗಂಭೀರವಾಗಿ ಪರಿಗಣಿಸದೇ ಕಾರ್ಮಿಕರನ್ನೇ ನಂಬಿಕೊAಡರೆ ಸಮಸ್ಯೆ ಖಂಡಿತಾ ಎಂದು ಎಚ್ಚರಿಸಿದ ಜಗದೀಶ್, ಪ್ರಸ್ತುತ ಶೇ.೫ ರಷ್ಟಿರುವ ಸ್ಪೆಷಾಲಿಟಿ ಕಾಫಿ ಶೇ. ೪೦ ರಷ್ಟು ಮಾರುಕಟ್ಟೆ ಪ್ರಮಾಣ ಹೊಂದುವ ಸಾಧ್ಯತೆ ಇದೆ, ಹೀಗಾಗಿ ಸ್ಪೆಷಾಲಿಟಿ ಕಾಫಿಯತ್ತ ಹೆಚ್ಚಿನ ಗಮನ ನೀಡುವುದು ಸೂಕ್ತ ಎಂದೂ ಅವರು ಹೇಳಿದರು.

ಭಾರತದಲ್ಲಿ ಕಾಫಿಯ ಬಗ್ಗೆ ಯುವಪೀಳಿಗೆ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ೨೦೧೮ ರಲ್ಲಿ ಕಾಫಿ ಮಂಡಳಿಗೆ ೧೮೦ ಕೋಟಿ ರೂಪಾಯಿ ಅನುದಾನ ನೀಡಲಾಗುತ್ತಿತ್ತು, ಈ ವರ್ಷ ೩೦೭ ಕೋಟಿ ರೂಪಾಯಿಗಳ ಅನುದಾನ ದೊರಕಿದ್ದು ಸಾಕಷ್ಟು ಯೋಜನೆಗಳನ್ನು ಈ ಅನುದಾನದ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಮುಂದಿನ ೧ ವರ್ಷದಲ್ಲಿಯೇ ಭಾರತಾದ್ಯಂತ ೩ ಸಾವಿರ ಕಾಫಿ ಕೆಫೆಗಳು ಪ್ರಾರಂಭವಾಗುತ್ತಿರುವುದು ಕೂಡ ಕಾಫಿ ಕ್ಷೇತ್ರದ ಭವಿಷ್ಯದ ಬಗ್ಗೆ ಆಶಾಭಾವನೆ ಮೂಡಿಸಿದೆ. ಕಳೆದ ವರ್ಷ ೨೯೨ ಮೆಟ್ರಿಕ್ ಟನ್ ಉತ್ಪಾದನೆಯಿದ್ದ ಭಾರತೀಯ ಕಾಫಿ ಈ ವರ್ಷ ೩೬೦ ಮೆಟ್ರಿಕ್ ಟನ್‌ಗಳ ಮೂಲಕ ೮೦ ಸಾವಿರ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಳ ಕಂಡಿರುವುದು ಕೂಡ ಹರ್ಷದಾಯಕ ಬೆಳವಣಿಗೆಯಾಗಿದ್ದರೂ ಅಕಾಲಿಕ ಮಳೆಯಿಂದಾಗಿ ಕಾಫಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮದ ಸಾಧ್ಯತೆ ಚಿಂತೆಗೀಡು ಮಾಡಿದೆ ಎಂದು ಹೇಳಿದರು.

ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎ. ಮಂದಣ್ಣ ಮಾತನಾಡಿ, ಸುಸ್ಥಿರ ಕಾಫಿ ಬೆಳೆಯತ್ತ ಪ್ರತೀ ಬೆಳಗಾರರೂ ಆದ್ಯತೆ ನೀಡುವಂತಾಗಬೇಕು. ಪರಿಸರ, ಆರ್ಥಿಕತೆ ಮತ್ತು ಸಾಮಾಜಿಕ ಸೇವೆಯತ್ತಲೂ ತೋಟ ಕೃಷಿಕರು ಗಮನ ಹರಿಸಬೇಕೆಂದು ಹೇಳಿದರಲ್ಲದೇ, ಟಾಟಾ ಕಾಫಿ ಸಂಸ್ಥೆಯ ತೋಟಗಳಲ್ಲಿ ಪರಿಸರ ಸ್ನೇಹಿ ಪಲ್ಪರ್‌ಗಳು, ಮಳೆ ಕೊಯ್ಲು ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿರುವ ಪರಿಣಾಮವೇ ಮಣ್ಣಿನ ಫಲವತ್ತತೆ ಹೆಚ್ಚಳವಾಗಿ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ. ಅಂತರ್ಜಲ ಮಟ್ಟದಲ್ಲಿಯೂ ಹೆಚ್ಚಳವಾಗಿದೆ ಎಂದು ಮಾಹಿತಿ ನೀಡಿದರು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ನಂದ ಬೆಳ್ಯಪ್ಪ ಮಾತನಾಡಿ, ಕಳೆದ ೧ ವರ್ಷದಲ್ಲಿ ಅಸೋಸಿಯೇಷನ್ ವತಿಯಿಂದ ಹಲವಾರು ಗಮನಾರ್ಹ ಯೋಜನೆ ಜಾರಿಗೊಳಿಸಲಾಗಿದೆ. ಜಮ್ಮ, ಸಾಗು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಲಾಗಿದೆ ಬೆಳೆಗಾರರಿಗೆ ಕಾಲದಿಂದ ಕಾಲಕ್ಕೆ ಅಗತ್ಯ ಮಾಹಿತಿ ನೀಡಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಡಾ. ರಾಜಾ ವಿಜಯ್ ಕುಮಾರ್, ಯುನೈಟೆಡ್ ಕಿಂಗ್‌ಡಮ್‌ನ ಕೃಷಿ ಪರಿಣಿತ ಮಾರ್ಕ್ ತ್ರಿಸ್ನಿ, ಕೆ. ಸುದೀಂದ್ರ ಅವರು ಕಾಫಿ ಕೃಷಿ ಸಂಬAಧಿತ ವಿವಿಧ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಉಪಯುಕ್ತ ಮಾಹಿತಿಗಳನ್ನು ಬೆಳೆಗಾರರಿಗೆ ನೀಡಿದರು.

ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಕೆ. ಬೆಳ್ಯಪ್ಪ, ಉಪಾಧ್ಯಕ್ಷ ಎ. ಚಂಗಪ್ಪ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜೀವ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ, ಬಿ.ಡಿ. ಮಂಜುನಾಥ್, ಮೋಹನ್ ದಾಸ್, ಕೆ.ಪಿ. ಉತ್ತಪ್ಪ ಸೇರಿದಂತೆ ಕಾಫಿ ಉದ್ಯಮದ ಅನೇಕರು ಹಾಜರಿದ್ದರು. ವಿವಿಧ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲ್ಪಟ್ಟಿತ್ತು.