ಮಡಿಕೇರಿ, ನ. ೪ : ಒಬ್ಬ ಮನುಷ್ಯನಿಗೆ ಆರೋಗ್ಯವೇ ಮುಖ್ಯ. ಆರೋಗ್ಯ ಇದ್ದರೆ ಆತ ಏನನ್ನು ಬೇಕಾದರೂ ಸಾಧಿಸುತ್ತಾನೆ. ಕೋಟ್ಯಂತರ ರೂ. ಆಸ್ತಿ ಇದ್ದು, ಆತನಿಗೆ ಆರೋಗ್ಯ ಇಲ್ಲದಿದ್ದರೆ ಯಾವುದೇ ಪ್ರಯೋಜನವೂ ಇಲ್ಲ. ನಮ್ಮ ಸಮಾಜದಲ್ಲಿ ಅದೆಷ್ಟೋ ಬಡರೋಗಿಗಳು ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆಯಿಂದ ಇಂದಿಗೂ ಕೂಡ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಮಾರಕ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಹಣವಿಲ್ಲದೆ, ವರ್ಷಂಪ್ರತೀ ಲಕ್ಷಾಂತರ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷಗಳ ಹಿಂದೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ "ಮಾನವೀಯತೆಗಿಂತ ಅತೀ ದೊಡ್ಡ ಧರ್ಮ ಮತ್ತೊಂದಿಲ್ಲ" ಎಂಬ ಧ್ಯೇಯವಾಕ್ಯದಿಂದ ಸೇವ್ ದಿ ಡ್ರೀಮ್ಸ್ ಎಂಬ ಸಂಸ್ಥೆಯು, ಬಡರೋಗಿಗಳ ಆಶಾಕಿರಣವಾಗಿ ಇಡೀ ದಕ್ಷಿಣ ಭಾರತದಲ್ಲಿ ಎಲ್ಲರ ಮನಗೆದ್ದಿದೆ. ಹೌದು ಸಮಾಜದಲ್ಲಿ ಮಾರಕ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕ ಬಲವಿಲ್ಲದ ಕುಟುಂಬಗಳಿಗೆ ಸೇವ್ ದಿ ಡ್ರೀಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಿಸಿ, ಬಡರೋಗಿಗಳ ಬೆಳಕಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ಜಾಲತಾಣವನ್ನು ಬಡರೋಗಿಗಳ ಚಿಕಿತ್ಸೆಗೆ ನೆರವಾಗಲು, ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ಕೂಡ ಬಳಸಬಹುದಾಗಿದೆ ಎಂಬುದಕ್ಕೆ ಕೊಡಗಿನ "ಸೇವ್ ದಿ ಡ್ರೀಮ್ಸ್" ಪ್ರಮುಖ ನಿದರ್ಶನವಾಗಿದೆ. ಕ್ಯಾನ್ಸರ್, ಕಿಡ್ನಿ ಸಮಸ್ಯೆ, ಮೆದುಳು ಸಂಬAಧಿ ಕಾಯಿಲೆ ಇತ್ಯಾದಿ ಮಾರಕ ರೋಗಗಳಿಗೆ ತುತ್ತಾಗಿದ್ದ ಅದೆಷ್ಟೋ ಬಡರೋಗಿಗಳು, ಸೇವ್ ದಿ ಡ್ರೀಮ್ಸ್ ನೆರವಿನ ಮೂಲಕ ಚಿಕಿತ್ಸೆ ಪಡೆದು ಜೀವನಕ್ಕೆ ಮರಳಿದ್ದಾರೆ.
ಎಲ್ಲವೂ ಪಾರದರ್ಶಕ, ಎಲ್ಲರಿಗೂ ಮಾದರಿ
ಮಾರಕ ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ದುರ್ಬಲವಾಗಿರುವ ರೋಗಿ, ಅಥವಾ ರೋಗಿಯ ಸಂಬAಧಿಕರು ಸೇವ್ ದಿ ಡ್ರೀಮ್ಸ್ ಸಂಸ್ಥೆಯನ್ನು ನೆರವಿಗೆ ಸಂಪರ್ಕಿಸಿದರೆ, ಸೇವ್ ದಿ ಡ್ರೀಮ್ಸ್ ತಂಡ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ವೀಡಿಯೋ ಮಾಡಿ ಹಣ ಸಂಗ್ರಹಿಸಿ ರೋಗಿಗೆ ನೆರವಾಗುತ್ತದೆ. ರೋಗಿಯ ಕುಟುಂಬಸ್ಥರ ಹಿನ್ನೆಲೆ, ರೋಗಿಯ ಆರ್ಥಿಕ ಪರಿಸ್ಥಿತಿ, ರೋಗಿಯು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ ರೋಗಿಯ ವಾಸಮಾಡುತ್ತಿರುವ ದೇವಸ್ಥಾನ ಆಡಳಿತ ಮಂಡಳಿಯ ಪತ್ರ, ಮುಸ್ಲಿಮ್ ಆಗಿದ್ದರೆ ಮಸೀದಿ ಸಮಿತಿ ಹಾಗೂ ಕ್ರಿಶ್ಚಿಯನ್ ಆಗಿದ್ದರೆ ಚರ್ಚ್ ಕಮಿಟಿ ಪತ್ರದೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಪತ್ರ ಕೂಡ ಸೇವ್ ದಿ ಡ್ರೀಮ್ಸ್ ಸಂಸ್ಥೆಗೆ ನೀಡಬೇಕು.
ಅದಲ್ಲದೇ ರೋಗಿಯು ಯಾವ ಕಾಯಿಲೆಯಿಂದ ಬಳಲುತ್ತಿದ್ದಾರೆ, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು, ಅದರೊಂದಿಗೆ ಚಿಕಿತ್ಸೆ ಪಡೆಯಲು ಎಷ್ಟು ಹಣ ವೆಚ್ಚವಾಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸೇವ್ ದಿ ಡ್ರೀಮ್ಸ್ ತಂಡವು ಆಸ್ಪತ್ರೆಯಿಂದ ಪಡೆಯುತ್ತದೆ.
ನಂತರ ರೋಗಿಯ ಊರಿನವರು ವೀಡಿಯೋ ಮುಖಾಂತರ ರೋಗಿ ಯಾವ ರೋಗಕ್ಕೆ ತುತ್ತಾಗಿದ್ದಾನೆ, ಎಷ್ಟು ಹಣ ಬೇಕಾಗಬಹುದು, ಹೀಗೆ ಸಂಪೂರ್ಣ ಮಾಹಿತಿಯನ್ನು ಜನರ ಮುಂದಿಟ್ಟು ನೇರವಾಗಿ ರೋಗಿಯ ಬ್ಯಾಂಕ್ ಖಾತೆಯನ್ನು ನೀಡಿ ಪಾರದರ್ಶಕತೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಿಸಿ ರೋಗಿಗಳಿಗೆ ಸೇವ್ ದಿ ಡ್ರೀಮ್ಸ್ ನೆರವಾಗುತ್ತದೆ. ರೋಗಿಯ ಚಿಕಿತ್ಸೆಗೆ ಆಸ್ಪತ್ರೆ ನೀಡಿದ ಒಟ್ಟು ವೆಚ್ಚ ಸಂಗ್ರಹವಾದರೆ ತಕ್ಷಣವೇ ಅಕೌಂಟ್ ಬಂದ್ ಮಾಡಲಾಗುತ್ತದೆ. ಹೆಚ್ಚು ಹಣ ಸಂಗ್ರಹವಾಗಿದ್ದರೆ ಬೇರೆ ಬಡರೋಗಿಗಳ ನೆರವಿಗೆ ನೀಡುತ್ತಿದ್ದಾರೆ. ಅದಲ್ಲದೇ ಎಷ್ಟು ಹಣ ಸಂಗ್ರಹವಾಗಿದೆ, ಆಸ್ಪತ್ರೆ ಬಿಲ್, ಎಲ್ಲಾ ಸಂಪೂರ್ಣ ಬ್ಯಾಂಕ್ ದಾಖಲೆಯೊಂದಿಗೆ ಊರಿನವರ ಮುಂದೆ ಲೆಕ್ಕವನ್ನು ಮಂಡಿಸಿ, ಪಾರದರ್ಶಕತೆಯಿಂದ ಕಳೆದ ಒಂದು ವರ್ಷಗಳಿಂದ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಬಡರೋಗಿಗಳಿಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ನೆರವು ನೀಡುತ್ತಾ, ಕೊಡಗಿನ ಸೇವ್ ದಿ ಡ್ರೀಮ್ಸ್ ಎಲ್ಲರ ಮನೆಮಾತಾಗಿದೆ.
೬೪ ಬಡರೋಗಿಗಳಿಗೆ ನೆರವು
ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಮಾರಕ ರೋಗಗಳಿಂದ ಬಳಲುತ್ತಿರುವ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂ. ವೆಚ್ಚ ಭರಿಸಲು ಸಾಧ್ಯವಿಲ್ಲದ ೬೪ಕ್ಕೂ ಹೆಚ್ಚು ರೋಗಿಗಳಿಗೆ ಸೇವ್ ದಿ ಡ್ರೀಮ್ಸ್ ಕಳೆದ ಒಂದುವರೆ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮುಖಾಂತರ ಜಾತಿ, ಮತ, ಧರ್ಮ ಭೇದವಿಲ್ಲದೆ ಕೋಟ್ಯಂತರ ರೂ. ಸಂಗ್ರಹಿಸಿ ಬಡರೋಗಿಗಳನ್ನು ಜೀವನಕ್ಕೆ ಮರಳಿ ತಂದಿದ್ದಾರೆ. ಮಾರಕವಾದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಯಾವುದೇ ಮಾರ್ಗವಿಲ್ಲದ ಭದ್ರಾವತಿಯ ಪುಟ್ಟ ಬಾಲಕಿಗೆ ಚಿಕಿತ್ಸೆ ಪಡೆಯಲು ಒಂದು ಕೋಟಿ ರೂ. ಅವಶ್ಯಕತೆ ಇತ್ತು. ತಕ್ಷಣ ಸೇವ್ ದಿ ಡ್ರೀಮ್ಸ್ ತಂಡವು ಸ್ಪಂದಿಸಿ ಒಂದು ಕೋಟಿ ರೂ. ಸಂಗ್ರಹಿಸಿ, ಬಾಲಕಿಗೆ ಚಿಕಿತ್ಸೆ ನೀಡಿತ್ತು. ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಇಬ್ಬರು ಮಕ್ಕಳ ಚಿಕಿತ್ಸೆಗೆ ಕೇವಲ ಎರಡು ದಿನದಲ್ಲಿ ೮೪ ಲಕ್ಷ ರೂ, ಕೇರಳ ಕಾಸರಗೋಡಿನ ರೋಗಿಯೊಬ್ಬರಿಗೆ ೮೪ ಲಕ್ಷ ರೂ, ಹಾಗೂ ತಮಿಳುನಾಡಿನಲ್ಲಿ ಕೇವಲ ಎರಡು ದಿನಗಳಲ್ಲಿ ರೋಗಿಯೊಬ್ಬರಿಗೆ ೩೨ ಲಕ್ಷ ರೂ ಸಂಗ್ರಹಿಸಿ ನೆರವಾಗಿದ್ದರು. ಕಳೆದ ಒಂದೂವರೆ ವರ್ಷದಲ್ಲಿ ೧೯ ಕೋಟಿಗೂ ಅಧಿಕ ರೋಗಿಗಳ ಚಿಕಿತ್ಸೆಗೆ ನೆರವು ನೀಡಿದ್ದಾರೆ. ವೀಡಿಯೋ ಮುಖಾಂತರ ೬೩ ಹಾಗೂ ಅದಲ್ಲದೇ ೨೦೦ಕ್ಕೂ ಅಧಿಕ ಸಣ್ಣಪುಟ್ಟ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೂ ಕೂಡ ಸೇವ್ ದಿ ಡ್ರೀಮ್ಸ್ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದೆ.
ಜೀವನಕ್ಕೆ ಮರಳಿದ ರೋಗಿಗಳು
ಮಾರಕವಾದ ಕಾಯಿಲಿಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ದುರ್ಬಲರಾಗಿದ್ದ ಬಡರೋಗಿಗಳು ಸೇವ್ ದಿ ಡ್ರೀಮ್ಸ್ ಮೂಲಕ ಚಿಕಿತ್ಸೆ ಪಡೆದು, ಜೀವನಕ್ಕೆ ಮರಳಿ, ಸಂತೋಷದಿAದ ಜೀವನ ನಡೆಸುತ್ತಿದ್ದಾರೆ. ಸೇವ್ ದಿ ಡ್ರೀಮ್ಸ್ ಕೇವಲ ರೋಗಿಗಳಿಗೆ ವೀಡಿಯೋ ಮೂಲಕ ಹಣ ಸಂಗ್ರಹಿಸಿ ನೆರವು ನೀಡುವುದಲ್ಲದೆ, ತಾವು ನೆರವು ನೀಡಿದ್ದ ರೋಗಿಗಳ ಚಿಕಿತ್ಸೆ ನಂತರವೂ ನಿರಂತರವಾಗಿ ರೋಗಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವೈದ್ಯರೊಂದಿಗೆ ಸಂಪರ್ಕಿಸಿ ರೋಗಿಯು ಸಂಪೂರ್ಣ ಗುಣಮುಖನಾಗುವವರೆಗೆ ರೋಗಿ ಮತ್ತು ಅವರ ಕುಟಂಬದೊAದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಭದ್ರಾವತಿಯ ಬಾಲಕಿ, ಕ್ಯಾನ್ಸರ್ಗೆ ತುತ್ತಾಗಿದ್ದ ಸುಳ್ಯ ಸಮೀಪದ ಕಲ್ಲುಗುಂಡಿಯ ಜನನಿ ಎಂಬ ಪುಟ್ಟ ಬಾಲಕಿ, ಹಾಸನ ಜಿಲ್ಲೆಯ ಅರಸೀಕೆರೆಯ ೧೬ ವರ್ಷದ ನೂತನ್ ಕುಮಾರ್ ಎಂಬ ಬಾಲಕ ಮತ್ತು ಕೊಡಗಿನ ಕೊಡಗರಹಳ್ಳಿಯ ನಿವಾಸಿ ಯಮುನಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇದೀಗ ಕಿಡ್ನಿ ‘ಟ್ರಾನ್ಸ್ಪ್ಲಾಂಟ್’ ಆಗಿ ಯಶಸ್ವಿಯಾಗಿ ಚೇತರಿಸಿಕೊಂಡಿದ್ದಾರೆ.
ಬಡ ಹೆಣ್ಣುಮಕ್ಕಳ ಮದುವೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು
ಸೇವ್ ದಿ ಡ್ರೀಮ್ಸ್ ಕೇವಲ ರೋಗಿಗಳಿಗೆ ನೆರವು ನೀಡುವುದಲ್ಲದೆ, ಯಾವುದೇ ಪ್ರಚಾರವಿಲ್ಲದೆ ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕವಾಗಿ ನೆರವು ನೀಡುತ್ತಾ ಬಂದಿದೆ. ಕಳೆದ ಒಂದುವರೆ ವರ್ಷದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯದ ವಿವಿಧ ಭಾಗಗಳಲ್ಲಿ ಯಾವುದೇ ಜಾತಿ, ಧರ್ಮ ನೋಡದೆ ಬಡ ಹೆಣ್ಣು ಮಕ್ಕಳ ಮದುವೆಗೆ ೫೦ಕ್ಕೂ ಹೆಚ್ಚು ಪೌನ್ ಚಿನ್ನಾಭರಣವನ್ನು ನೀಡಲಾಗಿದೆ.
ಅದಲ್ಲದೇ ಸರ್ಕಾರಿ ಶಾಲೆಯಲ್ಲಿ ಓದಿ ಅತೀ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಡಕುಟುಂಬಗಳಿಗೆ ತಿಂಗಳಿಗೆ ಆಹಾರದ ಕಿಟ್, ಇದುವರೆಗೆ ಸೂರಿಲ್ಲದ ಮೂವರು ಬಡವರಿಗೆ ಮನೆ ನಿರ್ಮಿಸಿಕೊಟ್ಟಿದೆ. (ಕೆ.ಎಂ ಇಸ್ಮಾಯಿಲ್ ಕಂಡಕರೆ)