ಗೋಣಿಕೊಪ್ಪಲು, ನ. ೪: ೧೯೨೪ನೇ ಇಸವಿಯಲ್ಲಿ ಬ್ರಿಟೀಷ್ ಸರ್ಕಾರವಿದ್ದ ಸಂದರ್ಭ ಆರಂಭವಾದ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೀಗ ೧೦೦ ವರ್ಷ ತುಂಬಿದ್ದು ಇದರ ಅಂಗವಾಗಿ ಶತಮಾನೋತ್ಸವ ಕಾರ್ಯಕ್ರಮ ನವೆಂಬರ್ ತಿಂಗಳ ೧೬ ಹಾಗೂ ೧೭ರಂದು ನಡೆಯಲಿವೆ. ಈಗಾಗಲೇ ಶಾಲಾ ಕಟ್ಟಡವು ಸುಣ್ಣಬಣ್ಣದಿಂದ ಕಂಗೊಳಿಸುತ್ತಿದ್ದು ಶತಮಾನೋತ್ಸವದ ಕಾರ್ಯಕ್ರಮದ ಯಶಸ್ವಿಗೆ ಸಮಿತಿಯು ಶ್ರಮಿಸುತ್ತಿದೆ.

ಶತಮಾನೋತ್ಸವ ಅಂಗವಾಗಿ ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ ಹಳೆಯ ವಿದ್ಯಾರ್ಥಿ ಪ್ರಸ್ತುತ ಕರ್ನಾಟಕ ಸರ್ಕಾರದ ಇಂಧನ ಸಚಿವರಾಗಿರುವ ಕೆ.ಜೆ.ಜಾರ್ಜ್ರವರು ೨೦ ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದು ಈ ಅನುದಾನದಲ್ಲಿ ಶತಮಾನೋತ್ಸವ ಭವನವು ನಿರ್ಮಾಣವಾಗಲಿದೆ. ಇದರೊಂದಿಗೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣನವರು ರೂ. ೭ ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉತ್ತಮ ಉದ್ಯೋಗ ಹಾಗೂ ಉತ್ತಮ ಸ್ಥಾನದಲ್ಲಿದ್ದಾರೆ. ಗ್ರಾಮೀಣ ಭಾಗದ ಈ ಸರ್ಕಾರಿ ಪ್ರಾಥಮಿಕ ಶಾಲೆಯು ಇದೀಗ ಶತಮಾನೋತ್ಸವ ಸಂಭ್ರಮದಲ್ಲಿದ್ದು ಕಾರ್ಯಕ್ರಮದ ಅಂಗವಾಗಿ‘ವಿದ್ಯಾಕಾವೇರಿ’ ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಮರಣ ಸಂಚಿಕೆಯು ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು. ಶಾಲೆಯ ಬೆಳವಣಿಗೆಯ ಬಗ್ಗೆ ಸಮಗ್ರ ಚಿತ್ರಣ ಈ ಸಂಚಿಕೆಯಲ್ಲಿ ಹೊರತರುವ ಪ್ರಯತ್ನ ಮಾಡಲಾಗಿದೆ ಎಂದು ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷರಾದ ಸಣ್ಣುವಂಡ ಎಂ.ವಿಶ್ವನಾಥ್ ತಿಳಿಸಿದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೆ.ಟಿ.ಟಿಪ್ಪು ಬಿದ್ದಪ್ಪ ನೇಮಕಗೊಂಡಿದ್ದು ಇವರ ಅಧ್ಯಕ್ಷತೆಯಲ್ಲಿ ೨ ದಿನಗಳ ಕಾಲ ಕ್ರೀಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಸಾಧಕರಿಗೆ ಸನ್ಮಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮೀಣ ಭಾಗದ ಶಾಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಜನೆ ಪೂರೈಸಿ ಇಂದಿಗೂ ದೇಶ ಹಾಗೂ ವಿದೇಶಗಳಲ್ಲಿ ಹಲವು ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ರಾಜಕೀಯವಾಗಿಯೂ ಸೇವೆ ನೀಡಿದವರು ಈ ಶಾಲೆಯಿಂದ ವಿದ್ಯಾಭ್ಯಾಸ ಕಲಿತು ಮುಂದೆ ಬಂದಿದ್ದಾರೆ.

೧೯೨೪ನೇ ಇಸವಿಯಲ್ಲಿ ಬ್ರಿಟೀಷ್ ಸರ್ಕಾರವಿದ್ದ ಸಂದರ್ಭ ಆರಂಭವಾದ ಈ ಶಾಲೆಯು ಈ ಹಿಂದೆ ಗ್ರಾಮ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿ ನಡೆಯುತ್ತಿತ್ತು. ಊರಿನ ಪ್ರಮುಖರ, ಹಿರಿಯರ ಇಚ್ಚಾ ಶಕ್ತಿಯಿಂದ ೧೯೫೬ರಲ್ಲಿ ಪ್ರಸ್ತುತ ಇರುವ ೬ ಏಕರೆ ವಿಸ್ತಿರ್ಣ ಜಾಗದಲ್ಲಿ ಶಾಲೆ ಆರಂಭಗೊAಡಿದೆ. ೨೦೨೪ಕ್ಕೆ ೧೦೦ ವರ್ಷ ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ಶತಮಾನೋತ್ಸವ ಆಚರಣೆ ನಡೆಯುತ್ತಿದೆ. ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಓಸಾಟ್ ಎಂಬ ಖಾಸಗಿ ಸಹಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ೪ ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಒಸಾಟ್ ಸಂಸ್ಥೆಯ ಪಿ.ವಿ. ಸುಬ್ರಮಣ್ಯ, ವಾದಿರಾಜ್ ಹಾಗೂ ಎನ್.ವಿ.ಜಿ.ಕೆ ಭಟ್ ಇವರುಗಳ ಪರಿಶ್ರಮದಿಂದ ಈ ಕಾರ್ಯ ನಡೆದಿತ್ತು.

ಮಾಯಮುಡಿ ಗ್ರಾ.ಪಂ.ವತಿಯಿAದ ಕಟ್ಟಡದ ಸುಣ್ಣ ಬಣ್ಣ ಹಾಗೂ ಇಂಗು ಗುಂಡಿ ನಿರ್ಮಿಸಲು ರೂ. ೨ ಲಕ್ಷ ಅನುದಾನವನ್ನು ಶತಮಾನೋತ್ಸವ ಸಮಿತಿಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಶಾಲೆಯ ಸಂಪೂರ್ಣಕಟ್ಟಡವು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ ಎಂದು ಮಾಯಮುಡಿ ಗ್ರಾ.ಪಂ.ಅಧ್ಯಕ್ಷರಾದ ಆಪಟ್ಟಿರ ಟಾಟು ಮೊಣ್ಣಪ್ಪ ಮಾಹಿತಿ ಒದಗಿಸಿದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಕೆ.ಟಿ.ಟಿಪ್ಪು ಬಿದ್ದಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಕುರಿತು ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಪಟ್ಟಿರ ಟಾಟು ಮೊಣ್ಣಪ್ಪ ಮಾತನಾಡಿ, ಊರಿನ ಗಣ್ಯರ, ದಾನಿಗಳ ಸಹಕಾರದಿಂದ ಶತಮಾನೋತ್ಸವ ಕಾರ್ಯಕ್ರಮವು ನಡೆಯಲಿದೆ. ರೂ. ೮ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಯ ಅಭಿವೃದ್ದಿಗಾಗಿ ದುಡಿದ ಮಹನೀಯರನ್ನು ಗುರುತಿಸಿ ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಕೊಡಗು ಉಸ್ತುವಾರಿ ಸಚಿವರಾದ ಭೋಸರಾಜ್, ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪ, ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್‌ಕೃಷ್ಣದತ್ತ ಒಡೆಯರ್, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಮಂತರ್‌ಗೌಡ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.

ಪೂರ್ವಬಾವಿ ಸಭೆಯಲ್ಲಿ ಶಾಲೆಯ ಮುಖ್ಯಶಿಕ್ಷಕರಾದ ಹೆಚ್.ಸಿ.ಜಯಮ್ಮ, ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಟಿ.ಬಿದ್ದಪ್ಪ, ಕಾರ್ಯದರ್ಶಿಗಳಾದ ಡಿ.ಯು.ರಾಗಿಣಿ, ಸ್ಮರಣ ಸಂಚಿಕೆ ಅಧ್ಯಕ್ಷರಾದ ಎಸ್.ಎಂ.ವಿಶ್ವನಾಥ್, ಗೌರವ ಕಾರ್ಯದರ್ಶಿ ಎಂ.ಟಿ.ಸತ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾನಂಡ ಪ್ರಥ್ಯು, ಸಲಹಾ ಸಮಿತಿ ಸದಸ್ಯರಾದ ಪುಚ್ಚಿಮಾಡ ರಾಯ್ ಮಾದಪ್ಪ, ಎಸ್.ಎಸ್. ಸುರೇಶ್,ಎಸ್‌ಡಿಎಂಸಿ ಅಧ್ಯಕ್ಷರಾದ ಎನ್.ಸಿ.ಉಮೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಮಣಿಕುಂಞ, ಮಾಜಿ ಸೈನಿಕರಾದ ಎಸ್.ಪಿ.ಮೋಹನ್‌ಚಂದ್ರ, ಹಿರಿಯ ವಿದ್ಯಾರ್ಥಿ ಬಲ್ಯಂಡ ಪ್ರತಾಪ್, ಶಿಕ್ಷಕರಾದ ಪಿ.ವಿ.ಲಾಯ್ಡ್, ಎಂ.ಟಿ.ಸುಮ, ಎ.ಲಾವಣ್ಯ, ಎಂ.ಕೆ.ಲೀಲಾ, ಕೆ.ಬಿ.ಪುಷ್ಪ ಹಾಗೂ ಎಂ.ಬಿ.ಸಹನಾ ಉಪಸ್ಥಿತರಿದ್ದರು.

(ವಿಶೇಷ ವರದಿ: ಹೆಚ್.ಕೆ.ಜಗದೀಶ್)