ಪೊನ್ನಂಪೇಟೆ, ನ. ೪: ಉನ್ನತ ಶಿಕ್ಷಣದಿಂದ ಸಾಮಾಜಿಕ ಸ್ಥಾನಮಾನ, ಸ್ವಾಭಿಮಾನದ ಬದುಕು ಗಳಿಸಲು ಸಾಧ್ಯ. ಜೊತೆಗೆ ಆರೋಗ್ಯಕರ ಮತ್ತು ಸಂಸ್ಕಾರಕ್ಕೆ ಸಮನಾಗಿರುವ ಉನ್ನತ ಶಿಕ್ಷಣದಿಂದ ಸಮಾಜದ ಸ್ವಾಸ್ಥö್ಯವೂ ಕಾಪಾಡಿಕೊಳ್ಳಬಹುದಾಗಿದೆ. ಆದ್ದರಿಂದ ಇದುವರೆಗೂ ಶಿಕ್ಷಣದಿಂದ ವಂಚಿತರಾಗಿದ್ದ ಹಿಂದುಳಿದ ಸಮುದಾಯದ ಪ್ರತಿಭಾವಂತರು ಹೆಚ್ಚು ಹೆಚ್ಚು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ತಯಾರಾಗಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರೂ ಆಗಿರುವ ನಿವೃತ್ತ ಐ.ಪಿ.ಎಸ್. ಅಧಿಕಾರಿ ನಿಸಾರ್ ಅಹಮದ್ ಹೇಳಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಆಶ್ರಯದಲ್ಲಿ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-೨೦೨೪ ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕತೆ ಹಾಗೂ ತಂತ್ರಜ್ಞಾನದ ವೇಗದ ಜೊತೆಗೆ ಈಗ ಸ್ಪರ್ಧಾತ್ಮಕತೆಯೂ ಹೆಚ್ಚಿದೆ. ಹಾಗಾಗಿ ಈಗ ಒಬ್ಬ ವ್ಯಕ್ತಿ ಸದಾ ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿದೆ. ಅದಕ್ಕಾಗಿ ತನ್ನ ಜೀವನದ ಯಾವುದೇ ಸಮಯದಲ್ಲೂ ಕಲಿಕೆ ಎಂಬುದು ನಿರಂತರವಾಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪರಿಪೂರ್ಣ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಲು ಎಲ್ಲರಿಗೂ ಶಿಕ್ಷಣ ಆತ್ಯಗತ್ಯ. ಪ್ರಸ್ತುತ ಕಾಲಘಟ್ಟದಲ್ಲಿ ಮಾನವ ಸಮೂಹ ಸಾಮಾಜಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಮೊದಲಾದ ವಿಷಯಗಳತ್ತ ಗಮನಹರಿಸಿ ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಲು ಉನ್ನತ ಶಿಕ್ಷಣ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಮಾತನಾಡಿ, ಸಭೆ ಸಮಾರಂಭಗಳಲ್ಲಿ ಜನರನ್ನು ಆಕರ್ಷಿಸಲು ಸಿನಿಮಾ ತಾರೆಗಳಿಗೆ ಆದ್ಯತೆ ನೀಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ದೇಶಭಕ್ತಿ, ತ್ಯಾಗ ಮತ್ತು ಬದ್ಧತೆಯಿಂದ ರಾಷ್ಟçಸೇವೆಗೈದ ಯೋಧರನ್ನು ಪರಿಗಣಿಸಿ ಅವರಿಗೆ ಗೌರವ ನೀಡಿದರೆ ಅದು ಇಡೀ ದೇಶದ ಯೋಧರಿಗೆ ನೀಡಿದ ಗೌರವವಾಗುತ್ತದೆ. ಈ ಕಾರ್ಯವನ್ನು ಮಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಭಿನಂದನಾರ್ಹ ಎಂದು ಶ್ಲಾಘಿಸಿದರು.

ಸಮಾರಂಭವನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಅವರು ಸಾಂಪ್ರದಾಯಿಕ ದಫ್ ಭಾರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಎಡಿಜಿಪಿ ಜಿ.ಎಂ. ಹಯಾತ್ ಮಾತನಾಡಿದರು. ವೇದಿಕೆಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಕೋಳುಮಂಡ ಮೊಹಮ್ಮದ್ ಸಿನಾನ್ ಖಿರಾಹತ್ ಪಠಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಈತಲತಂಡ ರಫೀಕ್ ತೂಚಮಕೇರಿ, ದುದ್ದಿಯಂಡ ಮುಸ್ಕಾನ್ ಸೂಫಿ, ಕರತೊರೆರ ಶರ್ಪುದ್ದೀನ್ ಮತ್ತು ಅಕ್ಕಳತಂಡ ಫಿದಾ ಸಾನಿಯ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಪೊಯಕೆರ ಎಸ್. ರಫೀಕ್ ವಂದಿಸಿದರು.