ಮಡಿಕೇರಿ, ನ. ೪ : ಕೊಡಗಿನಲ್ಲಿ ನಡೆಯುವ ಕೈಲ್‌ಪೊಳ್ದ್ ಕ್ರೀಡಾಕೂಟಗಳು ಪಾರಂಪರಿಕ ವೈಭವದ ಪ್ರತಿಬಿಂಬವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಬಣ್ಣಿಸಿದ್ದಾರೆ
ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಜಬ್ಬಂಡ ವಾಡೆಯಲ್ಲಿ ಎ.ಕೆ.ಸಿ ಸಂಸ್ಥೆ ಆಯೋಜಿಸಿದ್ದ ಸಾಂಪ್ರದಾಯಿಕ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಪೂರ್ವರು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಕೈಲ್‌ಪೊಳ್ದ್ ಕ್ರೀಡಾಕೂಟಗಳನ್ನು ಪ್ರತಿ ಗ್ರಾಮಗಳಲ್ಲಿ ನಡೆಸುವ ಮೂಲಕ ಭವ್ಯ ಪರಂಪರೆಯನ್ನು ಬಳುವಳಿಯಾಗಿ ನೀಡಿದ್ದು, ಅದನ್ನು ನಾವು ಪಾಲಿಸಲು ಬದ್ಧರಾಗಿರಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮದ ಹಿರಿಯರು ಹಾಗೂ ನಿವೃತ್ತ ಬೆಮೆಲ್ ಆಡಳಿತಾಧಿಕಾರಿ ಕೋಳುಮಾಡಂಡ ರಘು ಪೂವಪ್ಪ, ತಾವು ಬಾಲಕರಾಗಿದ್ದಾಗ ಮಂದ್‌ನಲ್ಲಿ ಕೈಲ್‌ಪೊಳ್ದ್ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯುತ್ತಿದ್ದವು. ಈಗಲೂ ಕೂಡ ಯುವಸಮೂಹ ಆ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಸಂಪ್ರದಾಯಗಳನ್ನು, ಆಚರಣೆಗಳನ್ನು ಆಚರಿಸಿ ಇತರರ ಆಚರಣೆಗಳನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ತೆನ್ನಿರ ರಮೇಶ್ ಪೊನ್ನಪ್ಪ, ಕ್ರೀಡಾಕೂಟದ ಆಯೋಜನೆಗೆ ಗ್ರಾಮದ ಜನತೆ ಸಂಪೂರ್ಣವಾಗಿ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿAದ ನಡೆಸಲು ಉತ್ತೇಜನ ನೀಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ಕ್ರೀಡಾಕೂಟಗಳು ಜರುಗಿದವು. ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹಾರಿಸುವುದು, ಮ್ಯಾರಥಾನ್, ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಕಣ್ಣಿಗೆ ಬಟ್ಟೆಕಟ್ಟಿ ಮಡಿಕೆ ಒಡೆಯುವುದು, ಕಾಳು ಹೆಕ್ಕುವುದು, ೧೦೦ ಮೀ ಓಟ, ವಾಲಗತ್ತಾಟ್ ಸೇರಿದಂತೆ ಐವತ್ತಕ್ಕೂ ಅಧಿಕ ಸ್ಪರ್ಧೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಪ್ರಮುಖರಾದ ಚೆರುಮಾಡಂಡ ಸತೀಶ್ ಸೋಮಣ್ಣ, ಮುಂಜಾAದಿರ ಸತ್ಯ ಬೋಪಯ್ಯ, ಕೋಳುಮಾಡಂಡ ಉಷಾ ಉತ್ತಪ್ಪ, ಜಬ್ಬಂಡ ರಾಜೀವ್ ಬೋಪಣ್ಣ, ಕೋಳುಮಾಡಂಡ ಕಿರಣ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.