ಮಡಿಕೇರಿ, ನ. ೪: ಕರ್ನಾಟಕ ಜಾನಪದ ಅಕಾಡೆಮಿಯಿಂದ ವರ್ಷಂಪ್ರತಿ ನೀಡಲಾಗುವ ಪ್ರಶಸ್ತಿಗೆ ಕೊಡಗಿನ ಜಾನಪದ ಕಲೆಯಾದ ಉರ್ಟಿಕೊಟ್ಟ್ ಕಲಾವಿದೆ ಕುಡಿಯರ ಸಿ. ದೇವಕಿ ಆಯ್ಕೆಯಾಗಿದ್ದಾರೆ.
ಮೂಲತಃ ವೀರಾಜಪೇಟೆ ತಾಲೂಕಿನ ತೋರ ಸಮೀಪದ ಕೊರ್ತಿಕಾಡು ನಿವಾಸಿಯಾಗಿರುವ ದೇವಕಿಯವರು ಕಳೆದ ೨೦ ವರ್ಷಗಳಿಂದ ಉರ್ಟಿಕೊಟ್ಟ್ ಜಾನಪದ ಪ್ರಾಕಾರವನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿ ಜನಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಈ ಕಲೆಯನ್ನು ದೇವಕಿಯವರು ಯುವಕ-ಯುವತಿಯರಿಗೆ ಕಲಿಸುಕೊಡುವ ಮೂಲಕ ಕಲಾ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಇವರಿಗೆ ಕೊಡವ ಸಾಹಿತ್ಯ ಅಕಾಡೆಮಿಯಿಂದಲೂ ಗೌರವ ಪ್ರಶಸ್ತಿ ಲಭಿಸಿತ್ತು.
ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ದೇವಕಿ ಅವರು, ಪ್ರಶಸ್ತಿ ಬಂದಿರುವುದು ಬಹಳ ಸಂತಸ ನೀಡಿದೆ. ಹಲವು ವರ್ಷಗಳಿಂದ ಉರ್ಟಿಕೊಟ್ಟ್ ಕಲೆಯನ್ನು ಪ್ರದರ್ಶಿಸುತ್ತಿದ್ದೇನೆ. ಮಕ್ಕಳಿಗೂ ಕಲಿಸುತ್ತಿದ್ದೇನೆ. ಕಳೆದ ನಾಲ್ಕು ವರ್ಷಗಳ ಹಿಂದೆ ತನ್ನ ಮಗ ಹಾಗೂ ಪತಿಯ ಸಾವಿನ ನಂತರ ಕಲೆಯಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಯಿತು. ಮುಂದಿನ ದಿನಗಳಲ್ಲಿ ಈ ಕಲೆಯನ್ನು ಮುಂದುವರೆಸಿಕೊAಡು ಹೋಗುವುದಾಗಿ ಹೇಳಿದರು.
ಜಾನಪದ ಅಕಾಡೆಮಿ ಈ ಬಾರಿ ೩೦ ಜಿಲ್ಲೆಯ ೩೦ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಸೇರಿದಂತೆ ಇಬ್ಬರು ಜಾನಪದ ತಜ್ಞರು, ೫ ಮಂದಿಗೆ ಪುಸ್ತಕ ಬಹುಮಾನವನ್ನು ಘೋಷಿಸಿದೆ.