ಗೋಣಿಕೊಪ್ಪಲು, ನ.೪: ಕರ್ನಾಟಕ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸರ್ವ ಶಿಕ್ಷಣ ಆಭಿಯಾನದಡಿಯಲ್ಲಿ ಶಿಕ್ಷಣ ಇಲಾಖೆಯು ಹೆಣ್ಣು ಮಕ್ಕಳಿಗೆ ಕರಾಟೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ ಎಂದು ದಕ್ಷಿಣ ಭಾರತದ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮಾಜಿ ಎಂಎಲ್‌ಸಿ ಸಿ.ಎಸ್.ಅರುಣ್ ಮಾಚಯ್ಯ ಹೇಳಿದರು.

ಕೊಡಗು ಜಿಲ್ಲಾ ಕರಾಟೆ ಅಸೋಸಿಯೇಷನ್, ಕೊಡಗು ಜಿಲ್ಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಬಾಲಕ ಬಾಲಕಿಯರ ಕರಾಟೆ ಪಂದ್ಯಾವಳಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ, ವಸತಿ ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ, ಕರಾಟೆಯನ್ನು ಪರಿಚಯಿಸಿದ ಕೀರ್ತಿ ಕರಾಟೆ ಅಸೋಸಿಯೇಷನ್‌ಗೆ ಸಲ್ಲುತ್ತದೆ.

ಅನೇಕ ಪೈಪೋಟಿಗಳನ್ನು ಎದುರಿಸಿ ಇಂದು ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸತತವಾಗಿ ಕರಾಟೆಯನ್ನು ಅಭ್ಯಾಸಿಸುವ ಪಟುಗಳು ನಂತರದಲ್ಲಿ ಉತ್ತಮ ಕರಾಟೆ ಪಟುಗಳಾಗಿ ಹೊರಹೊಮ್ಮುವ ಮೂಲಕ ತೀರ್ಪುಗಾರರಾಗಿ ಕೆಲಸ ನಿರ್ವಹಿಸುತ್ತಾರೆ. ಇಂತಹ ಕ್ರೀಡಾಪಟುಗಳನ್ನು ಸಮಾಜವು ಗುರುತಿಸುತ್ತಿದೆ. ಆ ಮೂಲಕ ಗೌರವವನ್ನು ನೀಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟೀರ ಕೆ. ಬಿದ್ದಪ್ಪ ಮಾತನಾಡಿ, ದೇಶದಲ್ಲಿ ಉತ್ತಮ ನಾಗರಿಕನಾಗಲು ಕರಾಟೆ ಕ್ರೀಡೆಯು ಅಗತ್ಯವಾಗಿದೆ. ಕರಾಟೆ ಪಟುವಿನಿಂದ ಯಾರಿಗೂ ತೊಂದರೆ ಇಲ್ಲ. ತನ್ನ ರಕ್ಷಣೆಗಾಗಿ ಇಂತಹ ಕ್ರೀಡೆಯನ್ನು ಕರಗತ ಮಾಡಿಕೊಳ್ಳುವುದು ಉತ್ತಮ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕಾವೇರಪ್ಪ ಮಾತನಾಡಿದರು. ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ತಾಲೂಕು ಅಧಿಕಾರಿ ಕವಿತ ತಮ್ಮಯ್ಯ ಕರಾಟೆ ಅಸೋಸಿಯೇಷನ್‌ನ ಹಿರಿಯರಾದ ಪಟ್ರಪಂಡ ರಘು ನಾಣಯ್ಯ, ತೀರ್ಪುಗಾರರಾದ ಭಾನು ಕಾವೇರಪ್ಪ, ಅರುಣ್ ಶನಿವಾರಸಂತೆ. ಮುಕೇಶ್, ಶಿವಣ್ಣ, ಜಮ್ಮಡ ಜಯ ಜೋಯಪ್ಪ, ಮೂಡಗದ್ದೆ ಆರ್,ಸುಮನ್, ಕೆ.ಪಿ.ಸೋಮಣ್ಣ, ಮೈಸೂರಿನ ಮೋಹನ್ ಹಾಗೂ ತಂಡ, ಐ.ಕೆ.ಇಕ್ಬಾಲ್, ಶಿವಪ್ಪ,ಅನಿಲ್ ಕುಮಾರ್, ಆಂತೋಣಿ, ಕಾರ್ತಿಕ್ ದೇವಯ್ಯ. ಲಯನ್ಸ್ ಶಾಲೆಯ ದೈಹಿಕ ಶಿಕ್ಷಕ ನಾಗೇಶ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು.

ಜಿಲ್ಲೆಯ ವಿವಿಧ ಭಾಗದಿಂದ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಆಗಮಿಸಿದ್ದರು. ಮುಂಜಾನೆಯಿAದ ಸಂಜೆಯವರೆಗೂ ಕರಾಟೆ ಪಂದ್ಯಾವಳಿಯು ಮೂರು ಹಂತದಲ್ಲಿ ಏಕಕಾಲದಲ್ಲಿ ಜರುಗಿತು. ವಿದ್ಯಾರ್ಥಿಗಳ ಪೋಷಕರು ಸೇರಿದಂತೆ ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.