ಗೋಣಿಕೊಪ್ಪ, ನ. ೫: ಸ್ಥಳೀಯ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹುಲ್ಲಿನ ಮೇಲುಹೊದಿಕೆಯ ಚಿಕ್ಕ ಕೋಣೆಯಲ್ಲಿ ಪ್ರಾರಂಭಿಸಿದ ಸರ್ಕಾರಿ ಶಾಲೆಗೆ ಶತಮಾನೋತ್ಸವದ ಸಂಭ್ರಮ.

೧೯೧೬ರಲ್ಲಿ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು. ಈ ನೂರಾರು ವರ್ಷಗಳಲ್ಲಿ ಡಾಕ್ಟರ್, ಇಂಜಿನಿಯರ್, ಸರ್ಕಾರಿ ಉದ್ಯೋಗಗಳು, ರಾಜಕೀಯ ಮುಖಂಡರುಗಳು, ವಿದೇಶಿ ಉದ್ಯೋಗಿಗಳು ಸೇರಿದಂತೆ ಶಾಲೆಯ ಪಠ್ಯ ಚಟುವಟಿಕೆಯ ಮುಖಾಂತರ ಹಲವಾರು ಕ್ಷೇತ್ರಗಳಿಗೆ ಕೊಡುಗೆ ನೀಡಿ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಸೃಷ್ಟಿಸಿದೆ.

೧೯೧೬ರಲ್ಲಿ ಶಾಲೆ ಪ್ರಾರಂಭವಾದರೂ, ೧೯೨೭ರಲ್ಲಿ ಸರ್ಕಾರದ ಮಾನ್ಯತೆಯೊಂದಿಗೆ ಶಾಲೆ ನಡೆದುಬಂದಿದೆ. ಶಾಲೆ ಪ್ರಾರಂಭದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಿತ್ತು. ಪ್ರಸ್ತುತ ಒಂದರಿAದ ಎಂಟನೇ ತರಗತಿಯನ್ನು ಉನ್ನತೀಕರಿಸಿದ ಶಾಲೆಯಾಗಿ ೩೨೪ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಖ್ಯ ಶಿಕ್ಷಕ ಸೇರಿದಂತೆ ಸುಮಾರು ೧೪ ಸಹ ಶಿಕ್ಷಕರು, ದೈಹಿಕ ಶಿಕ್ಷಕ, ಚಿತ್ರಕಲಾ ಶಿಕ್ಷಕರು ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲೆ ಸುಸರ್ಜಿತವಾದ ೨೮ ಕೊಠಡಿಗಳನ್ನು ಹೊಂದಿದೆ. ೨.೪೦ ಎಕರೆ ವಿಸ್ತೀರ್ಣದಲ್ಲಿ ಮಕ್ಕಳ ನಲಿಕಲಿಗೆ ಅನುಕೂಲಕರವಾದ ವಾತಾವರಣವನ್ನು ಕಟ್ಟಿಕೊಡಲಾಗಿದೆ. ವಿಶೇಷವಾಗಿ ೨೦೧೫ ರಿಂದ ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಲಾಗಿದ್ದು, ಸುಮಾರು ೩೦ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ಯುಕೋ ಕ್ಲಬ್, ಚಿತ್ರಕಲಾ ಸಂಘ, ವಿಜ್ಞಾನ ಸಂಘ, ಕ್ರೀಡಾ ಸಂಘಗಳು ಕ್ರೀಯಾಶೀಲವಾಗಿದೆ. ತಂತ್ರಜ್ಞಾನದ ಬಳಕೆಯಲ್ಲಿ ಮುಂದುವರೆದಿದ್ದು, ಪ್ರಾಜೆಕ್ಟರ್, ಕಂಪ್ಯೂಟರ್ ಉಪಯೋಗಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ೧೭ ಸದಸ್ಯರ ಬಲದೊಂದಿಗೆ ಕೆ.ಆರ್. ಶಾಂತಿ ಅಧ್ಯಕ್ಷರಾಗಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಎಂ.ಜಿ ಮೋಹನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆ ದಾಖಲಾತಿಯ ಪ್ರಕಾರ ಪ್ರಥಮವಾಗಿ ೧೯೩೫ರಲ್ಲಿ ಐ.ಸಿ ಸೋನ್ಸ್ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ನಂತರ ವರ್ಷಗಳಲ್ಲಿ ೨೩ನೇ ಮುಖ್ಯೋಪಾ ಧ್ಯಾಯರಾಗಿ ಕುಮಾರ್ ಹೆಚ್.ಕೆ ಅವರು ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇವರೊಂದಿಗೆ ಚಿತ್ರಕಲಾ ಶಿಕ್ಷಕರಾಗಿ ಬಿ.ಆರ್ ಸತೀಶ್, ದೈಹಿಕ ಶಿಕ್ಷಕರಾಗಿ ರಮಾನಂದ ಟಿ.ಡಿ, ಸಹ ಶಿಕ್ಷಕರುಗಳಾಗಿ ಬಿ.ಎಂ ನಿರ್ಮಲ, ಎಂ.ಜಿ ಜೋಶ್ಲಿಯ, ಎನ್.ಕೆ ಜಯಶ್ರೀ, ಹೆಚ್.ಇ. ಅನಿತಾ ಕುಮಾರಿ, ಎಸ್ ದಮಯಂತಿ, ಕೆ.ಎಂ ತ್ರಿವೇಣಿ, ಕೆ ಎನ್ ಶಾರದಾ, ಇಂದಿರಾ, ನಾಗರಾಜು, ಸ್ನೇಹ ಕಾವೇರಮ್ಮ, ಸಿದ್ದರಾಜು, ಎಲ್.ಕೆ.ಜಿ. ಶಿಕ್ಷಕಿ ಪೂಜಾ ಇವರುಗಳು ಮಕ್ಕಳಿಗೆ ಜ್ಞಾನಾರ್ಜನೆ ಮಾಡುತ್ತಿದ್ದಾರೆ.