ವೀರಾಜಪೇಟೆ, ನ. ೫: ಜಲಶುದ್ಧಿ ನಿರ್ವಹಣಾ ಘಟಕಕ್ಕೆ ರೂ. ೨.೭೬ ಕೋಟಿ ಅನುದಾನ ಶಾಸಕರ ವಿಶೇಷ ಪ್ರಯತ್ನದಿಂದ ಬಿಡುಗಡೆಗೊಂಡಿದೆ ಎಂದು ವೀರಾಜಪೇಟೆ ಪುರಸಭೆಯ ಅಧ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ ಮಾಹಿತಿ ನೀಡಿದರು.
ಪುರಸಭೆಯ ಅಧ್ಯಕ್ಷರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆ ಮತ್ತು ವಾಣಿಜ್ಯ ಸಂಕೀರ್ಣ, ಜನವಸತಿ ಪ್ರದೇಶಗಳಿಂದ ಸಂಗ್ರಹವಾಗುವ ತ್ಯಾಜ್ಯ ಮತ್ತು ಮಲಿನವಾದ ನೀರು ನಗರದ ವಿವಿಧ ಭಾಗಗಳಲ್ಲಿ ಹರಿಯುವ ತೋಡು, ಕಿರು ತೋಡುಗಳು, ಕಾಲುವೆಗೆ ಸೇರುತ್ತಿದೆ. ತೋಡುಗಳಲ್ಲಿ ಸಂಗ್ರಹಗೊAಡ ಮಲಿನ ನೀರು ನೇರವಾಗಿ ಕದನೂರು ಹೊಳೆ ಮೂಲಕ ಕಾವೇರಿ ನದಿಯನ್ನು ಸೇರುತ್ತಿದೆ. ಇದರಿಂದ ನದಿಯು ಮಲಿನವಾಗಿ, ಜಲಚರಗಳು, ಪ್ರಾಣಿಸಂಕುಲ, ಮನುಜನ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ಮನಗಂಡು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರÀ ಎ.ಎಸ್ ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ ಪರಿಸರ ಮಾಲಿನ್ಯ ನಿರ್ಮೂಲನ ಮಂಡಳಿಯ ಅಧೀನದಲ್ಲಿ ಬರುವ ಎನ್.ಜಿ.ಟಿ ಹಾಗೂ ಎಸ್.ಬಿ.ಎಂ. (ಯು) ೨.೦ ಅನುದಾನದಲ್ಲಿ ಜಲಶುದ್ಧಿ ಅಭಿಯಾನದ ಅಡಿಯಲ್ಲಿ (ಬಳಸಿದ ನೀರು ನಿರ್ವಹಣೆ) ಘಟಕ ಸ್ಥಾಪನೆಗೆ ರೂ. ೨.೭೬ ಕೋಟಿ ಅನುದಾನ ಬಿಡುಗಡೆಗೊಂಡಿದೆ. ಈ ಯೋಜನೆಯಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೩ ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಸ್ಥಳ ನಿಗದಿ ಮಾಡುವ ಕಾರ್ಯಕ್ಕೆ ಪುರಸಭೆ ಮುಂದಾಗಿದೆ. ಯೋಜನೆಯಿಂದ ತೋಡುಗಳಲ್ಲಿ ಸಂಗ್ರಹಗೊAಡು ತ್ಯಾಜ್ಯ ನೀರು ನೇರವಾಗಿ ಸಂಸ್ಕರಣ ಘಟಕಕ್ಕೆ ಬರುತ್ತದೆ. ಘಟಕದಲ್ಲಿ ತ್ಯಾಜ್ಯ ನೀರು ಶುದ್ಧೀಕರಣಗೊಳಿಸಿ ನದಿಗೆ ಹರಿಯ ಬಿಡಲಾಗುತ್ತದೆ. ಇದರಿಂದ ನದಿಯು ಮಲಿನವಾಗುವುದನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆಯ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್ ಪದ್ಮನಾಭ, ಎಸ್.ಹೆಚ್. ಮತೀನ್ ಮತ್ತು ಮೋಹಮ್ಮದ್ ರಾಫಿ ಉಪಸ್ಥಿತರಿದ್ದರು.