ಕೊಡ್ಲಿಪೇಟೆ, ನ. ೫: ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಸಹಭಾಗಿತ್ವದಲ್ಲಿ ಇಲ್ಲಿನ ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ‘ಕನ್ನಡ ರಾಜ್ಯೋತ್ಸವದೊಳ್ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮವನ್ನು ಕುಶಾಲನಗರ ಅಬಕಾರಿ ನಿರೀಕ್ಷಕ ಪಿ. ರಂಜನ್ ಅವರು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಮೊಬೈಲ್‌ನಿಂದ ಆದಷ್ಟೂ ದೂರ ಇರಬೇಕು. ಕಲಿಕಾ ಹಂತದಲ್ಲಿ ಜ್ಞಾನಾರ್ಜನೆಗೆ ಆದ್ಯತೆ ನೀಡಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪಾಲ್ಗೊಂಡು ಶ್ರಮಿಸಿದ ಮಹನೀಯರನ್ನು ಇಂದಿನ ಯುವ ಜನಾಂಗ ನೆನಪಿನಲ್ಲಿಡಬೇಕು.

ಪ್ರತಿ ಹೆಜ್ಜೆಯಲ್ಲೂ ಕನ್ನಡ ನಾಡು-ನುಡಿಯನ್ನು ಉಳಿಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ಅಭಿಪ್ರಾಯಿಸಿದರು.

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಹನೀಫ್ ಮಾತನಾಡಿ, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲೂ ಆಸಕ್ತಿ ಮೂಡಿಸಿಕೊಳ್ಳಬೇಕು. ಮಕ್ಕಳ ಪ್ರತಿಭೆಗಳನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ವಿಚಾರಗೋಷ್ಠಿ, ಕವಿಗೋಷ್ಠಿ, ಗೀತ ಗಾಯನ ಗಮನ ಸೆಳೆಯಿತು. ಶಾಲೆಯ ಪ್ರಾಂಶುಪಾಲ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕಾರ್ಯದರ್ಶಿ ಭಾನುಪ್ರಕಾಶ್, ಸಾಹಿತ್ಯ ಪರಿಷತ್ ನಿರ್ದೇಶಕ ಡಿ. ಭಗವಾನ್, ಹೋಬಳಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ. ಶಾಂತಮಲ್ಲಪ್ಪ, ರೋಟರಿ ಅಧ್ಯಕ್ಷ ಮಾದವ್ ಲಾಲ್, ಶಿಕ್ಷಕ ಡಿ.ಪಿ. ಸತೀಶ್ ಉಪಸ್ಥಿತರಿದ್ದರು.