ಕಣಿವೆ, ನ. ೫: ಕುಶಾಲನಗರ ತಾಲೂಕಿನ ಭೈರಪ್ಪನಗುಡಿ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ದೂರಿನ ಮೇರೆಗೆ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಗುಡ್ಡ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಶ್ರೀಗಂಧದ ಗಿಡಗಳು ಬೆಳೆದು ನಿಂತಿದ್ದು ಅವುಗಳ ಪೋಷಣೆಗಾಗಿ ಆಗ್ರಹ ಕೇಳಿಬಂದಿತ್ತು.

ಈ ಮಧ್ಯೆ ಭೂ ಹಿಡುವಳಿದಾರ ಕೃಷಿಕರು ತಾವು ಸಾಕಿರುವ ದನ ಕರುಗಳಿಗೆ ಜೋಳ ಮೊದಲಾದ ಹುಲ್ಲು ಬೆಳೆಯಲು ಗುಡ್ಡಗಳನ್ನು ನೆಲಸಮ ಮಾಡಲು ಬಂಡವಾಳ ಶಾಹಿಗಳಿಗೆ ದುಂಬಾಲು ಬಿದ್ದಿದ್ದರು.

ಕುಶಾಲನಗರ ವ್ಯಾಪ್ತಿಯ ಗುಡ್ಡೆಹೊಸೂರು ಮತ್ತಿತರ ತಗ್ಗು ಪ್ರದೇಶಗಳು ಬಡಾವಣೆಗಳಾಗುತ್ತಿರುವ ಕಾರಣ ಅಲ್ಲಿ ಯಥೇಚ್ಛವಾದ ಮಣ್ಣು ತುಂಬಿ ಸಮತಟ್ಟು ಮಾಡಲು ವ್ಯಾಪಕ ಮಣ್ಣು ಬೇಕಿರುವ ಕಾರಣ ಗುಡ್ಡಗಳನ್ನು ಸಮತಟ್ಟು ಮಾಡಿಕೊಡುವ ಒಳ ಒಪ್ಪಂದದೊAದಿಗೆ ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ.

ಈ ಮಧ್ಯೆ ಭೈರಪ್ಪನ ಗುಡಿಯ ಗುಡ್ಡ ಪ್ರದೇಶಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಡೆದಿರಬಹುದಾದ ಪರವಾನಗಿಯ ಬಗ್ಗೆ ವಿಚಾರಿಸಿದರು.

ಈ ಸಂದರ್ಭ ಪಟ್ಟೆದಾರರಾದ ಚಂದ್ರಶೇಖರ್, ಲಿಂಗರಾಜು, ಬಸವ ರಾಜು, ಮಹದೇವಪ್ಪ ಮೊದಲಾದ ವರು ಈ ಜಾಗ ಪಿತ್ರಾರ್ಜಿತ ಸ್ವತ್ತಾಗಿದ್ದು ದನಕರುಗಳ ಮೇವಿಗೆ ಜಾಗವಿ ಲ್ಲದಾಗಿದೆ. ಹಾಗಾಗಿ ಕೃಷಿ ಮಾಡಿ ದನಕರುಗಳಿಗೆ ಹುಲ್ಲು ಬೆಳೆಯಲು ಸಮತಟ್ಟು ಮಾಡುತ್ತಿರುವ ಬಗ್ಗೆ ಸಮಜಾಯಿಷಿ ನೀಡಿದರು. ಯಾವುದೇ ಶ್ರೀಗಂಧದ ಗಿಡಗಳನ್ನು ಹಾನಿ ಮಾಡದೇ ಸಂರಕ್ಷಿಸುವುದಾಗಿಯೂ ಅವರು ವಿವರಿಸಿದರು.