ಕುಶಾಲನಗರ, ನ. ೬: ಕುಶಾಲನಗರದಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಗುತ್ತಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಘಟಕ ಸಂಯುಕ್ತ ಆಶ್ರಯದಲ್ಲಿ ಈ ಯೋಜನೆ ರೂಪಿಸಿಕೊಂಡಿದೆ.
ಏಕಕಾಲಕ್ಕೆ ೫ ಸಾವಿರ ಜನರಿಂದ ಕನ್ನಡ ಗೀತೆ ಹಾಡುವ ವಿಶೇಷ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದೆ. ತಾ. ೧೧ರಂದು ಕಾರ್ಯಕ್ರಮ ನಡೆಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ ಎಸ್ ನಾಗೇಶ್ ಅವರ ನೇತೃತ್ವದಲ್ಲಿ ಪ್ರಮುಖರು ಪೂರ್ವ ಸಿದ್ದತೆಗಳನ್ನು ಕೈಗೊಂಡಿದ್ದಾರೆ.
೫೦ನೇ ವರ್ಷದ ಕರ್ನಾಟಕ ಸಂಭ್ರಮದ ಹಿನ್ನೆಲೆ ಈ ೫,೦೦೦ ಜನರ ಕಂಠ ದಾನಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ತಾಲೂಕು ಕ.ಸಾ.ಪ ಅಧ್ಯಕ್ಷರಾದ ಕೆ.ಎಸ್. ನಾಗೇಶ್, ನವೆಂಬರ್ ೧೧ ರಂದು ಏಕಕಾಲಕ್ಕೆ ೫೦೦೦ ಜನರಿಂದ ಕನ್ನಡ ನಾಡಗೀತೆ ಹಾಡುವ ಕಾರ್ಯಕ್ರಮ ಪಟ್ಟಣದ ರಥ ಬೀದಿಯಲ್ಲಿ ಮತ್ತು ಪ್ರವಾಸಿ ಮಂದಿರ ರಸ್ತೆಯಲ್ಲಿ ಸಾರ್ವಕಾಲಿಕ ದಾಖಲೆಯ ಕಾರ್ಯಕ್ರಮ ಇದಾಗಲಿದೆ ಎನ್ನುತ್ತಾರೆ ಅವರು.
ಕನ್ನಡದ ಹಾಡುಗಳಾದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಮತ್ತು ರೈತ ಗೀತೆ ಈ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಮೊಳಗಲಿವೆ. ಕುಶಾಲನಗರ ಅತಿ ಶೀಘ್ರದಲ್ಲಿ ಬೆಳವಣಿಗೆ ಕಂಡ ಪಟ್ಟಣವಾಗಿದ್ದು ಈ ನಗರದಲ್ಲಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಜನರು ಸೇರಿದಂತೆ ಉತ್ತರದ ಜನತೆ ಕೂಡ ವ್ಯಾಪಾರಕ್ಕೆ ಬಂದು ನೆಲೆಸಿದ್ದು ಹಲವು ಭಾಷಿಗರ ನೆಲೆ ಬೀಡಾಗಿದೆ.
ಸಮೀಪದಲ್ಲಿ ಟಿಬೆಟ್ ನಿರಾಶ್ರಿತ ನಾಗರಿಕರು ಕೂಡ ಆರು ದಶಕಗಳು ಕಳೆಯುತ್ತಿದ್ದು ಅವರಿಗೂ ಕನ್ನಡ ಭಾಷೆಯ
(ಮೊದಲ ಪುಟದಿಂದ) ಮೇಲೆ ಅತೀವ ಪ್ರೀತಿ ಕಾಣಬಹುದು. ಸುಮಾರು ೨೦ ಸಾವಿರಕ್ಕಿಂತಲೂ ಅಧಿಕ ಟಿಬೆಟಿಯನ್ನರು ತಮ್ಮ ಟಿಬೆಟ್ ಭಾಷೆಯೊಂದಿಗೆ ವ್ಯಾವಹರಿಕ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸೀಮಿತವಾಗಿ ಕನ್ನಡ ಭಾಷೆಯನ್ನು ಅವಲಂಬಿಸಿದ್ದಾರೆ. ನವಂಬರ್ ೧೧ರಂದು ೨ ಗಂಟೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮೆರವಣಿಗೆ ಸಭಾ ಕಾರ್ಯಕ್ರಮಗಳ ನಡುವೆ ಹಾಡು ಪ್ರಸ್ತುತಪಡಿಸಲಾಗುತ್ತಿದೆ. ಮೂರು ರೀತಿಯಾಗಿ ಗೀತೆಗಳು ಪ್ರತ್ಯೇಕ ಸಮಯದಲ್ಲಿ ಕೇಳಬಹುದಾಗಿದೆ. ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯ ಬಹುತೇಕ ಸಂಘ ಸಂಸ್ಥೆಗಳು ತಮ್ಮದೇ ಬ್ಯಾನರ್ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಅಭಿಮಾನ ವ್ಯಕ್ತಪಡಿಸಲು ಅವಕಾಶ ಇದೆ. ಕನ್ನಡ ಧ್ವಜದೊಂದಿಗೆ ಸಂಘಗಳ ಪ್ರೋತ್ಸಾಹ ಕೂಡ ಕನ್ನಡ ಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿದೆ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಕೇಶವ ಕಾಮತ್. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ಕಾಮತ್ ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಸುವ ಸಂದರ್ಭ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಕೂಡ ಈ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಅಂದಾಜು ೩೦೦೦ ವಿದ್ಯಾರ್ಥಿಗಳು ೨೦೦೦ ಸಾರ್ವಜನಿಕರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ಕೂಡ ಇದೇ ಸಂದರ್ಭ ಜಿಲ್ಲೆಗೆ ಆಗಮಿಸಲಿದೆ.
ಬೈಚನಹಳ್ಳಿಯ ಮಾರಿಯಮ್ಮ ದೇವಾಲಯದಿಂದ ಬೆಳಿಗ್ಗೆ ಆರಂಭಗೊಳ್ಳುವ ಈ ವಿಶೇಷ ಕಾರ್ಯಕ್ರಮದಲ್ಲಿ ಹಲವು ಕಲಾತಂಡಗಳು ಕೂಡ ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಲಿವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಆಗಮಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಡಿಕೇರಿ ಕ್ಷೇತ್ರ ಶಾಸಕರಾದ ಡಾ. ಮಂತರ್ ಗೌಡ ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಮೂಲಕ ವಿವಿಧ ಭಾಷೆಗಳ ಜನರನ್ನು ಒಳಗೊಂಡಿರುವ ಕುಶಾಲನಗರದಲ್ಲಿ ಕನ್ನಡ ಭಾಷೆಯ ಅಭಿಮಾನ ಹುಟ್ಟಿಸಲು ೫,೦೦೦ ಜನರಿಂದ ನಡೆಯುವ ಕನ್ನಡ ಕಂಠಗೀತೆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.