ಸೋಮವಾರಪೇಟೆ, ನ. ೬: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಆರಂಭ ಗೊಂಡಿರುವ ‘ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ’ಗೆ ಸೋಮವಾರಪೇಟೆಯಲ್ಲಿ ಅದ್ದೂರಿ ಸ್ವಾಗತದೊಂದಿಗೆ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸ ಲಾಯಿತು.

ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಹಾಗೂ ಆಯ್ದ ಇಲಾಖಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು.

ತಾ. ೧೧ರಂದು ಅಪರಾಹ್ನ ೩.೩೦ಕ್ಕೆ ರಥಯಾತ್ರೆ ಸೋಮವಾರಪೇಟೆಗೆ ಆಗಮಿಸಲಿದ್ದು, ಇಲ್ಲಿನ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಪೂರ್ಣಕುಂಭದೊAದಿಗೆ ರಥವನ್ನು ಸ್ವಾಗತಿಸಲಾಗುವುದು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಕನ್ನಡಾಭಿಮಾನಿಗಳ ಸಮ್ಮುಖದೊಂದಿಗೆ ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮೂಲಕ ಜೇಸೀ ವೇದಿಕೆಗೆ ಮೆರವಣಿಗೆ ಬರಲಾಗುವುದು ಎಂದರು.

ಜೇಸೀ ವೇದಿಕೆಯಲ್ಲಿ ೬.೩೦ರವರೆಗೆ ಕನ್ನಡ ಸಾಹಿತ್ಯಕ್ಕೆ ಸಂಬAಧಿಸಿದAತೆ ನೃತ್ಯ, ಹಾಡುಗಾರಿಕೆಯೊಂದಿಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ವೇಳೆ ಪ್ರವಾಸಿ ಮಂದಿರದಲ್ಲಿ ರಥ ತಂಗಲಿದೆ. ತಾ. ೧೨ರಂದು ಬೆಳಿಗ್ಗೆ ೭.೩೦ಕ್ಕೆ ಇಲ್ಲಿಂದ ಹೊರಟು ಶನಿವಾರಸಂತೆ ಮೂಲಕ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ತೆರಳಲಿದೆ ಎಂದು ಮಾಹಿತಿ ನೀಡಿದರು.

ರಥಯಾತ್ರೆಯು ಯಡವನಾಡು ಮಾರ್ಗವಾಗಿ ಸೋಮವಾರಪೇಟೆ ತಾಲೂಕಿಗೆ ಪ್ರವೇಶಿಸುವ ಸಂದರ್ಭ ಯಡವನಾಡು ಗ್ರಾಮದಲ್ಲಿ ಐಗೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಸ್ವಾಗತಿಸಲಾಗುವುದು. ಅಲ್ಲಿಂದ ಪಟ್ಟಣಕ್ಕೆ ಆಗಮಿಸುವ ಮಾರ್ಗ ಮಧ್ಯೆ ಇರುವ ಗ್ರಾಮಗಳ ಗ್ರಾಮಸ್ಥರು ರಥಯಾತ್ರೆ ಬಂದ ಸಂದರ್ಭ ಪುಷ್ಪಾರ್ಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ದಿನೇಶ್, ಜ್ಯೋತಿ ಅರುಣ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದೇಗೌಡ, ತಾಲೂಕು ಪಂಚಾಯಿತಿಯ ಅಶ್ವಥ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸ್ವಾಮಿ, ಪ.ಪಂ. ಮುಖ್ಯಾಧಿಕಾರಿ ಸತೀಶ್, ತಾಲೂಕು ಕಚೇರಿಯ ಲೋಹಿತ್, ಶರತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.