ಮಡಿಕೇರಿ, ನ. ೬: ಕುಶಾಲನಗರದ ಕೊಡವ ಜನಾಂಗದ ಮಹಿಳೆಯೊಬ್ಬರು ತನ್ನ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಕೆಲವು ಮಂದಿ ಅತಿಕ್ರಮಣ ಪ್ರವೇಶಿಸಿ ಬೆದರಿಕೆಯೊಡ್ಡಿರುವುದಾಗಿ ದೂರು ಸಲ್ಲಿಸಿದ್ದಾರೆ.

ಕುಶಾಲನಗರ ಸಮೀಪದ ಮುಳ್ಳುಸೋಗೆಯ ನಿವಾಸಿ ಪುಚ್ಚಿಮಾಡ ರೇಣುಕಾ ಉತ್ತಪ್ಪ ಎಂಬವರು ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರಿಗೆ ಈ ಸಂಬAಧ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ, ದೂರಿನ ಪ್ರತಿಯನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲೆಯ ಎಸ್ಪಿ ಅವರಿಗೂ ಕಳುಹಿಸಿದ್ದಾರೆ.

ದೂರಿನ ಮುಖ್ಯಾಂಶ ಈ ಕೆಳಗಿನಂತಿದೆ:

‘೧೯೮೪ರಲ್ಲಿ ನನ್ನ ತಂದೆಯವರು ೩೬ ಸೆಂಟ್ ಜಾಗವನ್ನು ಮುಳ್ಳುಸೋಗೆಯ ಮನೆಯಪಂಡ ಬೋಪಣ್ಣ ಅವರಿಂದ ಖರೀದಿಸಿದ್ದಾರೆ. ಆ ಬಳಿಕ ಅಲ್ಲಿಯೇ ಮನೆ ನಿರ್ಮಿಸಿ ನಮ್ಮ ಕುಟುಂಬ ವಾಸಿಸುತ್ತಿದೆ. ನಾನು ಬೆಂಗಳೂರಿನಲ್ಲಿ ವೃತ್ತಿಯಲ್ಲಿದ್ದೇನೆ. ಅಲ್ಲದೆ, ಬಹುತೇಕ ಮುಳ್ಳುಸೋಗೆಯ ಮನೆಯಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುತ್ತಿದ್ದೇನೆ. ಅಕ್ಟೋಬರ್ ೨೫ರಂದು ಇಬ್ಬರು ಮುಸ್ಲಿಂ ಯುವಕರು ನನ್ನ ಮನೆಯ ಆವರಣಕ್ಕೆ ಅಕ್ರಮ ಪ್ರವೇಶಿಸಿ ಈ ಆಸ್ತಿ ವಕ್ಫ್ ಮಂಡಳಿಗೆ ಸೇರಿದ್ದು ಎಂದು ತಗಾದೆ ತೆಗೆದರು. ನಾನು ಈ ಬಗ್ಗೆ ಸ್ಪಷ್ಟೀಕರಣ ನೀಡಿದಾಗ ಹೊರಗಡೆ ೧೫ ಮಂದಿ ಇದ್ದಾರೆ ಎಂದು ಬೆದರಿಕೆಯ ನುಡಿಯಾಡಿದರು. ನಾನು ಪೊಲೀಸರನ್ನು ಕರೆಸುತ್ತೇನೆ ಎಂದು ಎಚ್ಚರಿಕೆಯಿತ್ತಾಗ ಸ್ಥಳದಿಂದ ಪರಾರಿಯಾದರು. ಸದ್ಯದಲ್ಲಿಯೇ ನಾವು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಬರುತ್ತೇವೆ ಎಂದು ಮತ್ತೆ ಬೆದರಿಸಿ ಅವರು ತೆರಳಿದರು.’

ಈ ಹಿನ್ನೆಲೆಯಲ್ಲಿ ಕೊಡವ ಸಮಾಜಗಳ ಒಕ್ಕೂಟದಿಂದ ಈ ಬಗ್ಗೆ ರಕ್ಷಣೆ ನೀಡಿ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಈ ರೀತಿಯ ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಅವರು ತಮ್ಮ ದೂರಿನಲ್ಲಿ ಕೋರಿದ್ದಾರೆ.