ಕುಶಾಲನಗರ, ನ. ೬: ಸಮಾಜದಲ್ಲಿ ಮೌಢ್ಯತೆ ಅಧಿಕವಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಡಾ ಹುಲಿಕಲ್ ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಸಮೀಪ ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ಪರಿಷತ್ತಿನ ರಾಜ್ಯ ಮಟ್ಟದ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೌಢ್ಯತೆಯನ್ನು ಬೇರು ಸಹಿತ ಕೀಳಲು ಪರಿಷತ್ತು ನಾಲ್ಕು ವರ್ಷಗಳಿಂದ ಹಲವು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದೆ.

ಮಾನವನ ದುರಾಸೆಯಿಂದ ಪ್ರಕೃತಿಗೆ ಧಕ್ಕೆ ಉಂಟಾಗುತ್ತಿದೆ. ಪ್ರತಿಯೊಬ್ಬರೂ ಉತ್ತಮ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ ಎಂದರು.

ಈ ಸಂದರ್ಭ ಮಾತನಾಡಿದ ಸಂಸ್ಥೆಯ ಪ್ರಮುಖರಾದ ವೈದ್ಯ ಡಾ. ಅಂಜನಪ್ಪ ಜನರ ನಂಬಿಕೆಯನ್ನು ಪರೀಕ್ಷೆ ಮಾಡುವುದು ಅವಮಾನ ಮಾಡಿದಂತೆ ಆಗುತ್ತದೆ. ಮನಸ್ಸಿನ ಮೈಲಿಗೆಯನ್ನು ತೊಳೆಯಬೇಕಾಗಿದೆ. ಮನುಷ್ಯನಿಗೆ ಕೇಡು ಬಯಸುವ ದೇವರು ಎಲ್ಲಿಯೂ ಇರುವುದಿಲ್ಲ. ದೇವರನ್ನು ಮಾರುಕಟ್ಟೆ ಸರಕನ್ನಾಗಿ ಮಾಡುವುದು ಸರಿಯಲ್ಲ ಎಂದರು.

ವೀರಭೂಮಿ ಪ್ರವಾಸಿ ಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಷತ್ ಪದಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಪ್ರತಿನಿಧಿಗಳು ಇದ್ದರು.