*ಗೋಣಿಕೊಪ್ಪ, ನ. ೭: ವಕ್ಫ್ ಬೋರ್ಡ್ ಪಹಣಿ ಬದಲಾಯಿಸಿ ರೈತರ ಜಮೀನನ್ನು ತನ್ನದೆಂದು ವಶಕ್ಕೆ ಪಡೆಯಲು ಮುಂದಾಗಿರುವ ನಡೆಯನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ತಾ. ೯ರಂದು ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊನ್ನಂಪೇಟೆ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಪ್ರತಿಭಟನೆ ನಡೆಯಲಿದೆ. ಸಂಸದ ಯದುವೀರ್ ಒಡೆಯರ್, ಎಂಎಲ್ಸಿ ಸುಜಾ ಕುಶಾಲಪ್ಪ, ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಕೆ.ಜಿ ಬೋಪಯ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಹಿಂದೂ ವಿರೋಧಿ ನೀತಿ ಅನುಸರಿಸಿಕೊಂಡು ಬಂದಿದೆ ಎಂದು ದೂರಿದರು.

ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತೆರಳಿ ಅದಾಲತ್ ನಡೆಸಿ ಸಾರ್ವಜನಿಕರ ಆಸ್ತಿಗಳನ್ನು ವಕ್ಫ್ ಬೋರ್ಡ್ಗೆ ಹಸ್ತಾಂತರಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟಿಸಲು ಸಾರ್ವಜನಿಕರು ಜಾತಿ, ಬೇಧÀ ಮರೆತು ಪಾಲ್ಗೊಳ್ಳಬೇಕು ಎಂದರು.

ಮಂಡಲ ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ ಮಂಡಲ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಸಂದರ್ಭ ವಿರಾಜಪೇಟೆ ಮಂಡಲ ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಇದ್ದರು.